ಮೊದಲ ಅಧಿವೇಶನ ಫಲಪ್ರದ: ಸ್ಪೀಕರ್
ನವದೆಹಲಿ,ಜು.೩- ೧೮ನೇ ಲೋಕಸಭೆಯ ಮೊದಲ ಅಧಿವೇಶನ ಶೇಕಡಾ ೧೦೩ ರಷ್ಟು ಫಲಪ್ರಧವಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
ಅಧಿವೇಶನದಲ್ಲಿ ಹೊಸದಾಗಿ ಚುನಾಯಿತರಾದ ೫೩೯ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದು ರಾಷ್ಟ್ರಪತಿ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ೬೮ ಸದಸ್ಯರು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
“ಜೂನ್ ೨೬ ರಂದು ನಡೆದ ಲೋಕಸಭಾ ಸ್ಪೀಕರ್ ಚುನಾವಣೆ ಉಲ್ಲೇಖಿಸಿದ ಓಂ ಬಿರ್ಲಾ ಅವರು ಧ್ವನಿ ಮತದ ಮೂಲಕ ಎರಡನೇ ಬಾರಿಗೆ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಇಡೀ ಸದನಕ್ಕೆ ಕೃತಜ್ಞತೆ ಸಲ್ಲಿಸಿದರು” ಎಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯು ೧೮ ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು ಮತ್ತು ೬೮ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು ಜೊತೆಗೆ, ೫೦ ಸದಸ್ಯರು ಮಧ್ಯೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದರು.
ರಾಷ್ಟ್ರಪತಿ ಭಾಷಣದ ಮೇಲೆ ನಡೆದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡುವುದರೊಂದಿಗೆ ಲೋಕಸಭೆಯ ಚೊಚ್ಚಲ ಅಧಿವೇಶನ ಅನಿರ್ದಿಷ್ಠಾವಧಿಗೆ ಮುಂದೂಡಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರ ನೇಮಕವನ್ನು ಜೂನ್ ೨೭ ರಂದು ಸದನದಲ್ಲಿ ಘೋಷಿಸಲಾಯಿತು ಎಂದು ಹೇಳಲಾಗಿದೆ.
ನಿಯಮ ೩೭೭ರ ಅಡಿಯಲ್ಲಿ ಒಟ್ಟು ೪೧ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ನಿರ್ದೇಶನ ೭೩ಎ ಅಡಿಯಲ್ಲಿ ೩ ಹೇಳಿಕೆಗಳನ್ನು ನೀಡಲಾಗಿದೆ. ಇದನ್ನು ಹೊರತುಪಡಿಸಿ, ಅಧಿವೇಶನದಲ್ಲಿ ೩೩೮ ಕಾಗದ ಪತ್ರ ಮಂಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸದಸ್ಯರ ಪ್ರಮಾಣ ವಚನ ಮತ್ತು ಸಭಾಧ್ಯಕ್ಷರ ಚುನಾವಣೆಯ ಸಮಯದಲ್ಲಿ ಕಲಾಪಗಳು ಸುಗಮವಾಗಿ ನಡೆದಿದ್ದಕ್ಕಾಗಿ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಬಿರ್ಲಾ ಕೃತಜ್ಞತೆ ಸಲ್ಲಿಸಿದ ಅವರು ಸದನವನ್ನು ಸುಗಮವಾಗಿ ನಡೆಸಲು ಕೊಡುಗೆ ನೀಡಿದ ಪ್ರಧಾನಿ, ಸಂಸದೀಯ ವ್ಯವಹಾರಗಳ ಸಚಿವರು, ಪಕ್ಷಗಳ ನಾಯಕರು ಮತ್ತು ಸದನದ ಸದಸ್ಯರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಸತತ ಮೂರನೇ ಸರ್ಕಾರ ರಚಿಸಿದೆ. ಎನ್‌ಡಿಎ ೨೯೩ ಸ್ಥಾನಗಳನ್ನು ಗೆದ್ದರೆ, ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟ ೨೪೩ ಸ್ಥಾನಗಳನ್ನು ಗೆದ್ದಿದೆ.