ಸ್ಥಾಯಿ ಸಮಿತಿ ಚುನಾವಣೆಗೆ ಲಾಬಿ
ನವದೆಹಲಿ,ಸೆ.೨೭-ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸ್ಥಾಯಿ ಸಮಿತಿಯಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕಾಗಿ ದೇಶದ ರಾಜಧಾನಿಯಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತಿದೆ. ಸದ್ಯ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಶುಕ್ರವಾರ ಕಾರ್ಪೊರೇಷನ್‌ನ ಸ್ಥಾಯಿ ಸಮಿತಿಯಲ್ಲಿ ಖಾಲಿ ಇರುವ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಎಂಸಿಡಿ ಆಯುಕ್ತರಿಗೆ ಪತ್ರ ಬರೆದ ನಂತರ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ.
ಗುರುವಾರ ತಡರಾತ್ರಿಯವರೆಗೂ ಚುನಾವಣೆಯ ಗದ್ದಲ ಮುಂದುವರಿದೆ. ಒಂದೆಡೆ ರಾತ್ರಿ ೧೦ ಗಂಟೆಗೆ ಚುನಾವಣೆ ನಡೆಸುವಂತೆ ಎಲ್‌ಜಿ ನಿರ್ದೇಶನ ನೀಡಿದ್ದರೆ, ಇನ್ನೊಂದೆಡೆ ಆಮ್ ಆದ್ಮಿ ಪಕ್ಷದ ಗಲಾಟೆಯಿಂದ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಈಗ ಚುನಾವಣೆಯನ್ನು ಮುಂದೂಡಲಾಗಿದೆ, ಆದರೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಎಎಪಿ ನಡುವೆ ಮಾತಿನ ಸಮರ ಪ್ರಾರಂಭವಾಗಿದೆ. ಒಂದೆಡೆ ಆಮ್ ಆದ್ಮಿ ಪಕ್ಷ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಂದಿದೆ ಎಂದು ಆರೋಪಿದೆ, ಇನ್ನೊಂದೆಡೆ ಆಮ್ ಆದ್ಮಿ ಪಕ್ಷ ಚುನಾವಣೆಯಿಂದ ಓಡಿ ಹೋಗುತ್ತಿದೆ ಎಂದು ಬಿಜೆಪಿ ಕಿಡಿ ಕಾರಿದೆ.
ಬಿಜೆಪಿ ನಾಯಕ ಕಮಲಜಿತ್ ಸೆಹ್ರಾವತ್ ಅವರು ಪಶ್ಚಿಮ ದೆಹಲಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ಒಂದು ಸ್ಥಾನ ಖಾಲಿಯಾಗಿದೆ. ಈ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಇದೇ ವೇಳೆ ಕೌನ್ಸಿಲರ್‌ಗಳ ಬಳಿ ಮೊಬೈಲ್ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ವಿಚಾರವಾಗಿ ಗದ್ದಲ ಉಂಟಾಗಿದೆ. ಇದಾದ ನಂತರ ಮೇಯರ್ ಶೆಲ್ಲಿ ಒಬೆರಾಯ್ ಅವರು ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡಿದ್ದಾರೆ ಮತ್ತು ಸದನ ಸಭೆಯನ್ನು ಅಕ್ಟೋಬರ್ ೫ ಕ್ಕೆ ಮುಂದೂಡಲಾಗಿದೆ.