ದೆಹಲಿ ವಿವಿ ವಿದ್ಯಾರ್ಥಿ ಒಕ್ಕೂಟಕ್ಕೆ ಮತದಾನ
ಹೊಸದಿಲ್ಲಿ, ಸೆ.೨೭-ದಿಲ್ಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ. ಇಂದು ಬೆಳಗ್ಗೆಯಿಂದ ದೆಹಲಿ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳು ಮತ್ತು ವಿಭಾಗಗಳಲ್ಲಿ ಮತದಾನ ನಡೆಯುತ್ತಿದೆ.
ಕೆಲ ಕಾಲೇಜುಗಳಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತದಾನ ಮಾಡಲು ಆಗಮಿಸಿದ್ದರು.ಆಡಳಿತದ ಜೊತೆಗೆ ಪೊಲೀಸರು ಕಾಲೇಜುಗಳು ಮತ್ತು ವಿಭಾಗಗಳ ಹೊರಗೆ ಬಿಗಿ ಭದ್ರತೆ ಕೈಗೊಂಡಿದ್ದಾರೆ .ಈ ಚುನಾವಣೆಗಳಲ್ಲಿ ಎಬಿವಿಪಿ ಮತ್ತು ಎನ್ ಎಸ್ ಯುಐ ನಡುವೆ ಪ್ರಮುಖ ಪೈಪೋಟಿ ಏರ್ಪಟ್ಟಿದೆ.ಎಡ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಡಿಯುಎಸ್‌ಯು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನ್ಯಾಯಸಮ್ಮತೆ ಮತ್ತು ಪಾರದರ್ಶಕತೆ ಕಾಪಾಡುವಂತೆ ವಿದ್ಯಾರ್ಥಿ ಸಂಘಟನೆಗಳು ಮನವಿ ಮಾಡಿಕೊಂಡಿವೆ.ಬೆಳಗಿನ ಅವಧಿಯ ಕಾಲೇಜುಗಳಲ್ಲಿ ಮಧ್ಯಾಹ್ನ ೧ ಗಂಟೆಯವರೆಗೆ ಹಾಗೂ ಸಂಜೆ ಕಾಲೇಜುಗಳಲ್ಲಿ ಮಧ್ಯಾಹ್ನ ೩ರಿಂದ ೭.೩೦ರವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಸೆಪ್ಟೆಂಬರ್ ೨೮ ರಂದು ಮತದಾನದ ಫಲಿತಾಂಶ ಪ್ರಕಟವಾಗಬೇಕಿತ್ತು, ಆದರೆ ಪ್ರಸ್ತುತ ನ್ಯಾಯಾಲಯವು ಮತ ಎಣಿಕೆಗೆ ತಡೆಯಾಜ್ಞೆ ನೀಡಿದೆ. ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಾರ್ವಜನಿಕ ಸ್ಥಳಗಳಿಂದ ತಮ್ಮ ಪೋಸ್ಟರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ತೆಗೆದುಹಾಕುವವರೆಗೆ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.