ಬಾಂಬ್ ಸ್ಫೋಟ: ಮಗು ಸಾವು ಹಲವರಿಗೆ ಗಾಯ
ಪೇಶಾವರ,ಸೆ.೨೭-ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್ ಠಾಣೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಒಂದು ಮಗು ಸಾವನ್ನಪ್ಪಿದೆ ೨೫ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸರು ಎನ್ನಲಾಗಿದೆ.
ಪೇಶಾವರದಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿರುವ ಸ್ವಾಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಪೊಲೀಸ್ ಕಚೇರಿಗೆ ಬಂದ ಮಾಹಿತಿಯ ಪ್ರಕಾರ, ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿರುವ ಡಿಪೋದೊಳಗೆ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟ ಸಂಭವಿಸಿದೆ.
ತಕ್ಷಣ ರಕ್ಷಣಾ ಮತ್ತು ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪೊಲೀಸರನ್ನು ಬಚಾ ಖಾನ್ ವೈದ್ಯಕೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಹಲವರಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ.ಕಟ್ಟಡದ ಮೇಲಿನ ಭಾಗ ಕುಸಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಡೆದ ಸ್ಫೋಟ ಭಯೋತ್ಪಾದಕರ ದಾಳಿಯಲ್ಲ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತೀಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.