ಸಿದ್ದೇಶ್ವರ ಕುಟುಂಬದಿಂದ ಕಾರ್ಯಕರ್ತರ ನಿರ್ಲಕ್ಷ್ಯ
ದಾವಣಗೆರೆ.ಸೆ.೨೭: ಕಳೆದ ೨೫ ವರ್ಷಗಳಿಂದ ಬಿಜೆಪಿ ದಾವಣಗೆರೆಯಲ್ಲಿ ಭದ್ರಕೋಟೆಯಾಗಿತ್ತು. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಕುಟುಂಬ ಅಧಿಕಾರ ಅನುಭವಿಸಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಅಧಿಕಾರ ಸಿಕ್ಕರೆ ಮಾತ್ರ ಪಕ್ಷ ಸಂಘಟನೆಗೆ ಬರುವ ಸಿದ್ದೇಶ್ವರ ಸ್ವಾರ್ಥ ರಾಜಕಾರಣಿ. ಇಂಥವರಿಂದಲೇ ಪಕ್ಷಕ್ಕೆ ಜಿಲ್ಲೆಯಲ್ಲಿ ಭಾರೀ ಹಿನ್ನೆಡ ಆಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಾದ ರಾಜು, ಪ್ರವೀಣ್ ಜಾಧವ್ ಮಾತನಾಡಿ, ಲೋಕಸಭೆಯ ನಾಲ್ಕು ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಗೆಲ್ಲಿಸಿದ್ದೆವು. ಆದರೆ, ಈಗ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇದೆ. ರಣತಂತ್ರ ರೂಪಿಸಲು ಕರೆಯಲಾಗಿದ್ದ ಸಭೆಗೆ ಗೈರು ಹಾಜರಾಗಿದ್ದಾರೆ. ಅಧಿಕಾರ ಇದ್ದರೆ ಮಾತ್ರ ಪಕ್ಷ. ಇಲ್ಲದಿದ್ದರೆ ಅವರ ಪಾಡಿಗೆ ಇದ್ದುಬಿಟ್ಟರೆ ಪಕ್ಷ ಬಲಿಷ್ಠವಾಗುವುದು ಹೇಗೆ ಎಂದು ಪ್ರಶ್ನಿಸಿದರು.
ಜಿ. ಎಂ. ಸಿದ್ದೇಶ್ವರ ಗೆಲ್ಲಲು ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ಕಾರ್ಯಕರ್ತರು, ಮುಖಂಡರು, ಬಿಜೆಪಿ ಚಿಹ್ನೆ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪರ ಜನಪ್ರಿಯತೆ, ವರ್ಚಸ್ಸು ಕಾರಣ. ಕೇವಲ ತನಗೆ ಮಾತ್ರ ಅಧಿಕಾರ ಬೇಕು. ಉಳಿದವರಿಗೆ ಬೇಡ ಎನ್ನುವ ಮನೋಭಾವನೆಯಿಂದಲೇ ಪಕ್ಷ ದಿನೇ ದಿನೇ ಕುಸಿಯುತ್ತಿದೆ. ಕಾರ್ಯಕರ್ತರು, ಮುಖಂಡರು ದೂರ ಸರಿಯುವಂತಾಗಿದೆ. ಹಾಗಾಗಿ, ಪಕ್ಷ ಕಟ್ಟಿದ, ದುಡಿದ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಅವರಂಥ ನಾಯಕರಿಗೆ ಜಿಲ್ಲೆಯ ನಾಯಕತ್ವ ನೀಡಬೇಕು ಎಂದು ಒತ್ತಾಯಿಸಿದರು.