ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ತಜ್ಞರ ಸಮಿತಿ ಶೀಘ್ರ
ಕಲಬುರಗಿ:ಜು.2: ಕಲ್ಯಾಣ ಕರ್ನಾಟಕ ಭಾಗದಎಲ್ಲ ಏಳು ಜಿಲ್ಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತು ಪರಾಮರ್ಶೆ ನಡೆಸಲು ಮುಂದಿನ ಎರಡು ತಿಂಗಳೊಳಗೆ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ತಿಳಿಸಿದರು.
ಕೆಕೆಆರ್‍ಡಿಬಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯನ್ನು ಕೇವಲ ಐದಾರು ತಿಂಗಳಲ್ಲಿ ಅಮೂಲಾಗ್ರವಾಗಿ ಬದಲಾಯಿಸುವುದು ಅಸಾಧ್ಯದ ಮಾತಾಗುತ್ತದೆ.ಈ ನಿಟ್ಟಿನಲ್ಲಿ ದೀರ್ಘಕಾಲಿಕ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ. ಹಾಗಾಗಿ, ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ತಜ್ಞರ ವರದಿಗೆ ಅನುಗುಣವಾಗಿ ಎಲ್ಲ ಅಂಶಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು.
ಈಗಾಗಲೇ ಮಂಡಳಿ ವತಿಯಿಂದ ಅಕ್ಷರ ಆವಿಷ್ಕಾರ ಯೋಜನೆಯ ಅನುಷ್ಠಾನಕ್ಕಾಗಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೇ.25ರಷ್ಟು ಅನುದಾನಖರ್ಚು ಮಾಡಲಾಗುತ್ತಿದೆ.ಈ ಎಲ್ಲ ನಿಟ್ಟಿನಲ್ಲಿ ಶಿಕ್ಷಣ ತಜ್ಞರ ಮಾರ್ಗದರ್ಶನ ಫಲ ನೀಡಲಿದೆಎಂದು ಭರವಸೆ ವ್ಯಕ್ತಪಡಿಸಿದರು.
ಇನ್ನು ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ ರೂ.15 ಕೋಟಿಖರ್ಚು ಮಾಡಲಾಗುವುದು.ಇದರ ಜೊತೆಗೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಕೆಕೆಆರ್‍ಡಿಬಿ ಸಹಭಾಗಿತ್ವದಲ್ಲಿ ‘ಕಲ್ಯಾಣ ಪಥ’ ಯೋಜನೆ ಅಡಿ ಈ ಭಾಗದಎಲ್ಲ ಜಿಲ್ಲೆಗಳಲ್ಲಿ ಗುಣಮಟ್ಟದ 1000 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ಒಟ್ಟು ರೂ.1000 ಕೋಟಿಖರ್ಚು ಮಾಡಲಾಗುತ್ತಿದೆ. ರಾಜ್ಯ ಮುಂಗಡ ಪತ್ರದಲ್ಲಿ ಘೋಷಿಸಿರುವಂತೆ ಈ ಪೈಕಿ ರಾಜ್ಯ ಸರಕಾರ ರೂ.665 ಕೋಟಿ ಹಾಗೂ ಕೆಕೆಆರ್‍ಡಿಬಿ ರೂ.335 ಕೋಟಿ ಖರ್ಚು ಮಾಡಲಿವೆ ಎಂದರು.
ಆರೋಗ್ಯ ಆವಿಷ್ಕಾರ ಯೋಜನೆ ಅಡಿಯಲ್ಲಿ ಮಂಡಳಿ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ಕೆಕೆಆರ್‍ಡಿಬಿ ವತಿಯಿಂದ ರೂ.1 ಕೋಟಿ 49 ಲಕ್ಷರೂ. ಅನುದಾನ ಒದಗಿಸಲಾಗುವುದು.ಜೊತೆಗೆ, ಕಲಬುರಗಿ ನಗರದಲ್ಲಿ ಕಿದ್ವಾಯಿ ಇನ್ಸ್‍ಟಿಟ್ಯೂಟ್ ನಿರ್ಮಾಣಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯೊಂದಿಗೆ ಕೆಕೆಆರ್‍ಡಿಬಿ ಸಹ ಅಗತ್ಯ ಅನುದಾನ ಒದಗಿಸಲಿದೆ ಎಂದು ಮಾಹಿತಿ ನೀಡಿದರು.
ಮೇಲಾಗಿ, ಕೆಕೆಆರ್‍ಡಿಬಿ ವತಿಯಿಂದ ಪ್ರತಿ ತಿಂಗಳು ಮಂಡಳಿ ವ್ಯಾಪ್ತಿಯಎಲ್ಲ ಜಿಲ್ಲೆಗಳಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕಾಡುವ ಸ್ತನ ಕ್ಯಾನ್ಸರ್, ಗರ್ಭಕೋಶದ ಕಂಠದ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಈ ಶಿಬಿರ ಹೆಚ್ಚು ಪ್ರಯೋಜನಕ್ಕೆ ಬರಲಿದೆ ಎಂದು ಡಾ.ಅಜಯ್‍ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಯಾಣದ ಜಿಲ್ಲೆಗಳಲ್ಲಿ ಒಟ್ಟು 187 ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರತಿ ಶಾಲೆಗೆ ಮೂರರಿಂದಐದುಎಕರೆ ಸರಕಾರಿ ಭೂಮಿಯ ಅಗತ್ಯವಿದೆ.ಭೂಮಿ ಲಭ್ಯವಾಗುತ್ತಿದ್ದಂತೆಯೇ ತಲಾ ಮೂರರಿಂದ ಐದು ಕೋಟಿ ಅಂದಾಜು ವೆಚ್ಚದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರಲ್ಲದೆ ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೂ ಅನುದಾನ ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಕೆಕೆಆರ್‍ಡಿಬಿ ಕಾರ್ಯದರ್ಶಿ ಎಂ.ಸುಂದರೇಶ್ ಬಾಬು, ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ ಇದ್ದರು.
ಜು.15 ರೊಳಗೆ ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ
ಜುಲೈ 15 ರೊಳಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ಸಲ್ಲಿಸುವಂತೆಕಲ್ಯಾಣ ಕರ್ನಾಟಕ ಭಾಗದ ಎಲ್ಲ 41 ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ತಿಳಿಸಿದರು.
ಹಂತ ಹಂತವಾಗಿ ಬಯೋಮೆಟ್ರಿಕ್ ಹಾಜರಾತಿ
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಜರಾಗಿಯ ಮೇಲೆ ತೀವ್ರ ನಿಗಾ ಇಡಲು ಹಂತ ಹಂತವಾಗಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್‍ಎಸ್. ತಿಳಿಸಿದರು.
ಈಗಾಗಲೇ ಪ್ರಾಯೋಗಿಕವಾಗಿ ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ ತಾಲೂಕಿನಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.ಮೇಲಾಗಿ, ಈ ಕುರಿತು ರಾಜ್ಯ ಸರಕಾರದ ಗಮನಕ್ಕೂ ತರಲಾಗಿದ್ದು ಉತ್ತಮ ಸ್ಪಂದನೆ ದೊರೆತಿದೆ.ಹೀಗಾಗಿ, ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಸರಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
ಇದರ ಜೊತೆಗೆ, ನಾಲ್ಕು, ಐದು, ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ‘ಓದುಕರ್ನಾಟಕ’ ಎಂಬ ವಿನೂತನ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕಲಿಕೆ ವ್ಯವಸ್ಥೆ ದೊರೆತಾಗ ಒಂಬತ್ತು ಮತ್ತು 10ನೇ ತರಗತಿ ತಲುಪುವ ಹೊತ್ತಿಗೆ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತಾಗಿ ಆಸಕ್ತಿ ಹೆಚ್ಚಾಗಲು ಅನುಕೂಲವಾಗುತ್ತದೆ ಎಂದು ನುಡಿದರು.