ದೇಶದಲ್ಲಿ ಸರಾಸರಿಗಿಂತ ಹೆಚ್ಚು ಮಳೆ
ನವದೆಹಲಿ.ಜು.೨- ಈ ತಿಂಗಳು ದೇಶದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಐಎಂಡಿ ಮುನ್ಸೂಚನೆ ಪ್ರಕಾರ, ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದ್ದು ಶೇಕಡಾ ೮೦ ರಷ್ಟು ಸಂಭವನೀಯತೆ ಇದೆ.
ಮುಂಗಾರು ಮಾರುತಗಳು ಚುರುಕಾಗಿರುವುದರಿಂದ ಈ ತಿಂಗಳು ಋತುವಿನ ದ್ವಿತೀಯಾರ್ಧದಲ್ಲಿ ಮಳೆ ಸುರಿಯಲು ಅನುಕೂಲಕರವಾಗುವ ’ಲಾ ನಿನಾ’ ಪರಿಣಾಮವು ಪ್ರಭಾವ ಬೀರುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಮಾನ್ಸೂನ್ ಮೇ ೩೦ ರಂದು ಬೇಗನೆ ಕೇರಳ ಮತ್ತು ಈಶಾನ್ಯದಲ್ಲಿ ಆವರಿಸಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಅದರ ಪ್ರಗತಿ ನಿಧಾನವಾಯಿತು. ಇದು ವಾಯುವ್ಯ ಭಾರತದಲ್ಲಿ ಸುಡುವ ತೀವ್ರ ಶಾಖದ ಅಲೆಗಳಿಗೆ ಮತ್ತು ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ದೀರ್ಘಕಾಲದ ಕಠಿಣ ಪರಿಸ್ಥಿತಿಗಳಿಗೆ ಕಾರಣವಾಯಿತು.
ಭಾರತೀಯ ಆರ್ಥಿಕತೆಯಲ್ಲಿ ಮಾನ್ಸೂನ್ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಶೇಕಡಾ ೫೦ ರಷ್ಟು ಕೃಷಿಭೂಮಿಗೆ ಮಳೆ ಬಿಟ್ಟರೆ ಬೇರೆ ಯಾವುದೇ ನೀರಾವರಿ ಮೂಲಗಳಿಲ್ಲ. ಮುಂಗಾರು ಮಳೆಯು ದೇಶದ ಜಲಾಶಯಗಳು ಮತ್ತು ಜಲಾನಯನ ಪ್ರದೇಶಗಳನ್ನು ಮರುಪೂರಣ ಮಾಡಲು ಸಹ ನಿರ್ಣಾಯಕವಾಗಿದೆ.