ಗುಜರಾತ್‌ನಲ್ಲಿ ಮಳೆಯಬ್ಬರ ಹೆದ್ದಾರಿ ಬಂದ್
ಜುನಾಗಡ್,ಜು.೨-ಗುಜರಾತ್ ನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಇಂದು ಗುಜರಾತನಲ್ಲಿ ಕೆಲವು ಭಾಗಗಳಲ್ಲಿ ಸುರಿದು ಭಾರೀ ಮಳೆಯ ನಂತರ, ಜುನಾಗಢನ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ವರುಣನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲಾಡಳಿತವು ಮಂಗಳವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ. ಸ್ಥಳೀಯ ಹವಾಮಾನ ಇಲಾಖೆಯೂ ಮುಂದಿನ ದಿನಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಜುನಾಗಢದಲ್ಲಿ ಸೋಮವಾರ ಬೆಳಗ್ಗೆ ೬ ರಿಂದ ರಾತ್ರಿ ೮ ರವರೆಗೆ ೮ ಇಂಚುಗಳಷ್ಟು ಮಳೆ ದಾಖಲಾಗಿದೆ. ವಿಲ್ಲಿಂಗ್ಡನ್ ಅಣೆಕಟ್ಟು ಅದರ ಮೇಲಿನ ಮಿತಿಯನ್ನು ದಾಟಿ ತುಂಬಿ ಹರಿದಿದೆ .ಅಧಿಕಾರಿಗಳು ಸಬಲಿ, ಓಜತ್ ಮತ್ತು ಬಂಟ್ವಾ-ಖಾರೋ ಜಲಾಶಯಗಳಿಂದ ಕೆಳಗಿನ ಪ್ರದೇಶಗಳಿಗೆ ನೀರನ್ನು ಬಿಡುಗಡೆ ಮಾಡಿದ್ದಾರೆ.
ಸೋಮವಾರದಂದು ಸತತ ಎರಡನೇ ದಿನವೂ ಧಾರಾಕಾರ ಮಳೆ ಸುರಿದಿದೆ. ಅದೇ ಸಮಯದಲ್ಲಿ ದೇವಭೂಮಿ ದ್ವಾರಕಾ ಜಿಲ್ಲೆಯ ಕಲ್ಯಾಣಪುರ ತಾಲೂಕಿನಲ್ಲಿ ಸಂಜೆ ೬ ಗಂಟೆಯಿಂದ ೧೨ ಗಂಟೆಗಳ ಅವಧಿಯಲ್ಲಿ ೧೭೪ ಮಿ.ಮೀ ಮಳೆಯಾಗಿದೆ.
ದಕ್ಷಿಣ ಗುಜರಾತ್‌ನ ಸೂರತ್, ನವಸಾರಿ, ವಲ್ಸಾದ್ ಹಾಗೂ ಸೌರಾಷ್ಟ್ರ-ಕಚ್‌ನ ಜಾಮ್‌ನಗರ, ಪೋರಬಂದರ್, ಜುನಾಗಢ್, ದ್ವಾರಕಾ ಮತ್ತು ಕಚ್ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಿಗೆ ಇಂದು ಬೆಳಗ್ಗೆ ಭಾರತೀಯ ಹವಾಮಾನ ಇಲಾಖೆ ’ರೆಡ್ ಅಲರ್ಟ್’ ಘೋಷಿಸಿದೆ .ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.