ದೇಶದ ಹಲವೆಡೆ ಮಳೆ ನಿರೀಕ್ಷೆ
ನವದೆಹಲಿ,ಜು.೨-ಮುಂದಿನ ೫ ದಿನಗಳಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಸತತ ಎರಡನೇ ದಿನ ಗುಜರಾತ್ ನಲ್ಲಿ ಭಾರೀ ಮಳೆಯಾಗಿದೆ, ದೇವಭೂಮಿ ದ್ವಾರಕಾ ಜಿಲ್ಲೆಯ ಕಲ್ಯಾಣಪುರ ತಾಲೂಕಿನಲ್ಲಿ ೧೨ ಗಂಟೆಗಳ ಅವಧಿಯಲ್ಲಿ ೧೭೪ ಮಿಮೀ ಮಳೆಯಾಗಿದೆ.
ಹವಾಮಾನ ಇಲಾಖೆಯು ಇಂದು ರಾಜ್ಯದ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ದಕ್ಷಿಣ ಗುಜರಾತ ಸೌರಾಷ್ಟ್ರ-ಕಚ್ ಪ್ರದೇಶದ ಸೂರತ್, ನವಸಾರಿ, ವಲ್ಸಾದ್ ಹಾಗೂ ಜಾಮ್‌ನಗರ, ಪೋರಬಂದರ್, ಜುನಾಗಢ್, ದ್ವಾರಕಾ ಮತ್ತು ಕಚ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಜುಲೈ ೩ ರವರೆಗೆ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಇಲಾಖೆ ಪ್ರಕಾರ ಇಂದು ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದ ಕೆಲವು ಭಾಗಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಬಹುದು, ಆದರೆ ಉತ್ತರ ಗುಜರಾತ್, ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತದೆ. ನಾಳೆ ಸೂರತ್, ನವಸಾರಿ , ವಲ್ಸಾದ್ ಮತ್ತು ದಮನ್ ಮತ್ತು ದಾದ್ರಾ ನಗರ ಹವೇಲಿಯಲ್ಲಿ ಅತಿ ಹೆಚ್ಚು ಮಳೆಯಾಗಲಿದೆ , ರಾಜ್ಯದ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಚಂಡಮಾರುತದ ಪರಿಚಲನೆಯಿಂದಾಗಿ ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ.
ಇಂದು ಮತ್ತು ನಾಳೆ ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ಸೂಚನೆಯ ಪ್ರಕಾರ ಮುಂದಿನ ಏಳು ದಿನಗಳವರೆಗೆ ಮೋಡ ಕವಿದ ವಾತಾವರಣ ಇರಲಿದೆ. ಇಂದು ಮತ್ತು ನಾಳೆ ಸಾಧಾರಣದಿಂದ ಭಾರೀ ಮಳೆಯಾಗುತ್ತದೆ. ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಕೂಡ ಇಂದಿನಿಂದ ರಾಜಧಾನಿಯಲ್ಲಿ ಮಳೆ ಚಟುವಟಿಕೆ ಮತ್ತೆ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕಳೆದ ಎರಡು ದಿನಗಳಲ್ಲಿ ದೆಹಲಿ ಮತ್ತು ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ದಲ್ಲಿ ಮಳೆಯಿಂದ ಸ್ವಲ್ಪ ವಿರಾಮ ಕಂಡುಬಂದಿದೆ. ಇಂದಿನಿಂದ ದೆಹಲಿಯಲ್ಲಿ ಮಳೆ ಚಟುವಟಿಕೆಯು ಮತ್ತೆ ಹೆಚ್ಚಾಗುತ್ತದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ ಎಂದು ಸ್ಕೈಮೆಟ್ ಅಲ್ಲಿನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.