ಎನ್‌ಡಿಎ ಸಂಸದರಿಗೆ ಮೋದಿ ಪಾಠ
ನವದೆಹಲಿ,ಜು.೨- ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ದ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ “ಸದನದಲ್ಲಿ ನಿಯಮಗಳನ್ನು ಅನುಸರಿಸಿ” ಮತ್ತು ಸದನದಲ್ಲಿ ನಡವಳಿಕೆ ಖಚಿತಪಡಿಸಿಕೊಳ್ಳಿ” ಎನ್ನುವ ಮಂತ್ರವನ್ನು ಎನ್‌ಡಿಎ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಲಹೆ ನೀಡಿದ್ದಾರೆ.
ಎಲ್ಲಾ ಸಂಸದರು ರಾಷ್ಟ್ರ ಸೇವೆಗಾಗಿ ಸಂಸತ್ತಿಗೆ ಬಂದಿದ್ದಾರೆ ಮತ್ತು ಎನ್‌ಡಿಎ ಸಂಸದರು ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸದನದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಎನ್ ಡಿಎ ಮೈತ್ರಿಕೂಟದ ಸಂಸದರಿಗೆ ಕಿವಿಮಾತು ಹೇಳಿದರು.
ಬಿಜೆಪಿಯ ಉನ್ನತ ನಾಯಕರು ಮತ್ತು ಸಚಿವರು ಭಾಗವಹಿಸಿದ್ದ ಎನ್‌ಡಿಎ ಸಂಸದೀಯ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರು ತಮ್ಮ ಕ್ಷೇತ್ರ ಮತ್ತು ರಾಷ್ಟ್ರೀಯ ಮಹತ್ವದ ಸಮಸ್ಯೆಗಳನ್ನು ಪ್ರಸ್ತಾಪಿಸುವಾಗ ನಿಯಮಗಳನ್ನು ಅನುಸರಿಸಿ, ಪ್ರಧಾನಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಿಕೊಳ್ಳಲು ಮತ್ತು ನಡವಳಿಕೆಯನ್ನು ಖಾತ್ರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಅವರು ಮಾಡಿದ ಮೊದಲ ಭಾಷಣ ಇದಾಗಿದೆ.
ಸಭೆಯ ಬಳಿಕ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಎನ್‌ಡಿಎ ಸಂಸದರು ಪ್ರಧಾನ ಮಂತ್ರಿಯ ಮೂರನೇ ಅವಧಿಗೆ ಅಭಿನಂದನೆ ಸಲ್ಲಿಸಿದರು ಜೊತೆ ನಿರಂತರ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು
‘ಪ್ರಧಾನಿ ಮೋದಿ ನಾಯಕತ್ವದಲ್ಲಿ ಮೈತ್ರಿ ಒಗ್ಗೂಡಿದೆ’ ವಿಶೇಷವಾಗಿ ಅವರು ಪ್ರತಿಯೊಂದು ಅವಧಿಗೂ ಮುನ್ನ ಅವರ ನಾಯಕರಾಗಿ ಆಯ್ಕೆಯಾದಾಗ, ಸಂಸತ್ತಿನ ಅಧಿವೇಶನಗಳಲ್ಲಿ ಎನ್‌ಡಿಎ ಸಂಸದರ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದು ಅವರಿಗೆ ಹೆಚ್ಚು ವಾಡಿಕೆಯಾಗಿದೆ ಎಂದರು.
ಸಭೆಯಲ್ಲಿ, ಪ್ರತಿಯೊಬ್ಬ ಸಂಸದರು ತಮ್ಮ ಕುಟುಂಬದೊಂದಿಗೆ ‘ಪಿಎಂ ಸಂಗ್ರಹಾಲಯ’ಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. “ಸಂಸದರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ರೀತಿಯಲ್ಲಿ ನಡೆಯಬೇಕು. ಆಸಕ್ತಿಯಿರುವ ಮತ್ತು ಸಂಸತ್ತಿನಲ್ಲಿ ಕೈಗೆತ್ತಿಕೊಳ್ಳಬಹುದಾದ ವಿಷಯಗಳಲ್ಲಿ ಪರಿಣತಿ ಬೆಳೆಸಿಕೊಳ್ಳಿ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಸರಿಸಿ” ಎಂದು ಸಲಹೆ ನೀಡಿದ್ದಾರೆ.
ಮಿತ್ರ ಪಕ್ಷಗಳ ಪಾತ್ರ ಹಿರಿದು
ಈ ಭಾರಿಯ ಎನ್‌ಡಿಎ ಸರ್ಕಾರದಲ್ಲಿ ಮಿತ್ರಪಕ್ಷಗಳ ಪಾತ್ರ ಮಹತ್ವದ್ದು ಎನ್ನುವುದನ್ನು ಮನವರಿಕೆ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರನ್ನು ಜೊತೆಯಾಗಿ ಕೊಂಡೊಯ್ಯಲು ಮುಂದಾಗಿದ್ದಾರೆ.
೨೦೧೪ ರಿಂದ ಮೊದಲ ಬಾರಿಗೆ ಬಿಜೆಪಿಯು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿರುವುದರಿಂದ ಮತ್ತು ಸರ್ಕಾರದ ಮುಂದುವರಿಕೆಗಾಗಿ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿರುವುದರಿಂದ ಎನ್ ಡಿಎ ಸಭೆ ಮಹತ್ವ ಪಡೆದುಕೊಂಡಿದೆ.