ಬೋನಿಗೆ ಬಿದ್ದ ಚಿರತೆ:ನಿಟ್ಟುಸಿರು ಬಿಟ್ಟ ಜನತೆ
ತಿಪಟೂರು, ಜು. ೧- ಜನರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದಿಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಂಡು ಜನ-ಜಾನುವಾರುಗಳಲ್ಲಿ ಭಯದ ವಾತಾವರಣ ಸೃಷ್ಠಿಸಿತ್ತು. ಚಿರತೆ ಉಪಟಳದಿಂದ ಭಯಬೀತರಾಗಿ ರೋಸಿ ಹೋಗಿದ್ದ ಈ ಭಾಗದ ಜನತೆ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವ ಸಲುವಾಗಿ ಕಾರ್ಯಾಚರಣೆ ಕೈಗೊಂಡು ಗ್ರಾಮದ ಹೊರವಲಯದಲ್ಲಿರುವ ಗೌರಿಶಂಕರ್ ಎಂಬುವರ ತೋಟದಲ್ಲಿ ಬೋನ್ ಇಟ್ಟಿದ್ದರು. ಆಹಾರ ಅರಸಿ ಬಂದಿರುವ ಚಿರತೆ ಬೋನ್ ಒಳಗೆ ಹೋಗಿ ಲಾಕ್ ಆಗಿದೆ. ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಮಾದಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜನತೆ ಚಿರತೆ ನೋಡಲು ಮುಗಿ ಬಿದ್ದಿದ್ದರು. ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್, ಅರಣ್ಯ ಪಾಲಕ ಕೆ. ಶಿವಪ್ಪ, ಸಿಬ್ಬಂದಿಗಳಾದ ರೇವಣಸಿದ್ದಪ್ಪ, ಮಂಜುನಾಥ್ ಪಾಲ್ಗೊಂಡಿದ್ದರು.