ಕೇದಾರನಾಥ ದೇಗುಲದ ಬಳಿ ಹಿಮಪಾತ
ಉತ್ತರಾಖಂಡ.ಜು.೧- ಇಲ್ಲಿನ ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿ ಹಿಮಪಾತ ಸಂಭವಿಸಿದೆ.
ಇಲ್ಲಿನ ಚಾರ್ ಧಾಮ್ ಯಾತ್ರೆ ಆರಂಭವಾದಾಗಿನಿಂದಲೂ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೇದಾರನಾಥಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಹಿಮಪಾತ ಸಂಭವಿಸಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನಿನ್ನೆ ಬೆಳಗ್ಗೆ ಗಾಂಧಿ ಸರೋವರ ಬೆಟ್ಟಗಳಿಂದ ಭಾರೀ ಮಳೆ ಸುರಿದಿದ್ದು, ಮುಂಜಾನೆ ೫ ಗಂಟೆ ಸುಮಾರಿಗೆ ಕೇದಾರನಾಥದ ಗಾಂಧಿ ಸರೋವರದಲ್ಲಿ ಹಿಮಕುಸಿತ ಸಂಭವಿಸಿದೆ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಶಾಖ ಅಶೋಕ್ ತಿಳಿಸಿದ್ದಾರೆ. ಇದರಿಂದ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿರುವ ಪರ್ವತದ ಮೇಲೆ ಹಠಾತ್ ಹಿಮಕುಸಿತವನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಿಮಪಾತದಲ್ಲಿ ಬಿದ್ದ ಹಿಮವು ಹೆಚ್ಚಿನ ವೇಗದಲ್ಲಿ ಧಾವಿಸಿ ದೇವಸ್ಥಾನದ ಹಿಂದೆ ಇರುವ ಗಾಂಧಿ ಸರೋವರಕ್ಕೆ ಬಂದು ಬಿದ್ದಿದೆ.