ಎಸ್ಪಿ ಕಚೇರಿ ಆವರಣದಲ್ಲೇ ಪತ್ನಿಯ ಭೀಕರ ಹತ್ಯೆ
ಹಾಸನ,ಜು.೧-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲೇ ಹಾಡಹಗಲೇ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪೊಲೀಸ್ ಕಾನ್‌ಸ್ಟೇಬಲ್ ವೊಬ್ಬ ತನ್ನ ಪತ್ನಿಯನ್ನು
ಇರಿದು ಕೊಲೆಗೈದ ದುರ್ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಲೋಕನಾಥ್ ಪತ್ನಿ ಮಮತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಬಂಧಿಸಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು,ಕೋಪಗೊಂಡು ಪತಿ ವಿರುದ್ಧ ಇಂದು ಬೆಳಿಗ್ಗೆ ದೂರು ನೀಡಲು ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣಕ್ಕೆ ಪತ್ನಿ ಮಮತಾ ಬಂದಿದ್ದರು. ಇದರಿಂದ ಕ್ರುದ್ಧನಾದ ಕಾನ್‌ಸ್ಟೇಬಲ್ ಲೋಕನಾಥ್, ಪತ್ನಿಗೆ ಎಲ್ಲರ ಮುಂದೆಯೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಮತಾರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.