ಪ್ರಜಾಪ್ರಭುತ್ವದಲ್ಲಿ ಅಚಲ ನಂಬಿಕೆ, ಬದ್ಧತೆ
ನವದೆಹಲಿ,ಜೂ.೩೦- ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆ ಮತ್ತು ಬದ್ದತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ದೇಶಕ್ಕಾಗಿ ಮಾಡಿದ ಕೆಲಸ, ಸಮಾಜಕ್ಕಾಗಿ ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸ, ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಈ ಮೂಲಕ ಸಂವಿಧಾನ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ವಿರೋಧ ಪಕ್ಷಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಮೊದಲ ಹಾಗು ಒಟ್ಟಾರೆ ೧೧೧ನೇ ಅಕಾಶವಾಣಿಯ “ಮನ್ ಕಿ ಬಾತ್ ಸರಣಿ” ಯಲ್ಲಿ ದೇಶವಾಸಿಗಳೊಂದಿಗೆ ತಮ್ಮ ಮನದ ಮಾತು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ೬೫ ಕೋಟಿ ಜನರನ್ನು ಅಭಿನಂಧಿಸುವುದಾಗಿ ತಿಳಿಸಿದ್ದಾರೆ.
ವಿಶ್ವದ ಯಾವುದೇ ದೇಶದ ಜನರು ಇಷ್ಟೊಂದು ಸಂಖ್ಯೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿಲ್ಲ. ಇಂತಹ ದೊಡ್ಡ ಚುನಾವಣೆ ನಡೆಸಿದ ಚುನಾವಣಾ ಆಯೋಗವನ್ನು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಅಭಿನಂಧಿಸುವುದಾಗಿ ಹೇಳಿದ್ದಾರೆ.
ಮನ್ ಕಿ ಬಾತ್ ಸರಣಿಗಾಗಿ ಕಳೆದ ಫೆಬ್ರವರಿಯಿಂದ ನಾವೆಲ್ಲರೂ ಕಾಯುತ್ತಿದ್ದ ದಿನ ಬಂದಿದೆ. ’ಮನ್ ಕಿ ಬಾತ್’ ಮೂಲಕ, ಮತ್ತೊಮ್ಮೆ ನಿಮ್ಮ ನಡುವೆ, ನನ್ನ ಕುಟುಂಬ ಸದಸ್ಯರ ನಡುವೆ ಇದ್ದೇನೆ. ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ ಎಂದು ಫೆಬ್ರವರಿಯಲ್ಲಿ ಹೇಳಿದ್ದೇನೆ. ಚುನಾವಣಾ ಫಲಿತಾಂಶದ ನಂತರ ಮನ್ ಕಿ ಬಾತ್‌ನೊಂದಿಗೆ ನಿಮ್ಮ ನಡುವೆ ಇದ್ದೇನೆ ಇದು ಖುಷಿಯ ವಿಚಾರ ಎಂದಿದ್ಧಾರೆ
ತಾಯಿ ಹೆಸರಲ್ಲಿ ಗಿಡ ನಡೆ
“ಈ ವರ್ಷದ ವಿಶ್ವ ಪರಿಸರ ದಿನದಂದು ’ಏಕ್ ಪೆಡ್ ಮಾ ಕೆ ನಾಮ್’ ಎಂಬ ವಿಶೇಷ ಅಭಿಯಾನ ಪ್ರಾರಂಭಿಸಲಾಗಿದೆ, ನಾನು ನನ್ನ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟಿದ್ದೇನೆ ಮತ್ತು ಎಲ್ಲಾ ದೇಶವಾಸಿಗಳು ತಮ್ಮ ತಾಯಿಯೊಂದಿಗೆ ಅಥವಾ ಅವರ ಹೆಸರಿನಲ್ಲಿ ಒಂದು ಸಸಿಯನ್ನು ನೆಡುವಂತೆ ಮನವಿ ಮಾಡಿದ್ದಾರೆ.
ಜೂನ್ ೩೦ ಬಹಳ ಮುಖ್ಯವಾದ ದಿನವಾಗಿದೆ. ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಈ ದಿನವನ್ನು ’ಹುಲ್ ದಿವಸ್’ ಎಂದು ಆಚರಿಸುತ್ತಾರೆ. ಈ ದಿನ ವೀರರ ಧೈರ್ಯಕ್ಕೆ ಸಂಬಂಧಿಸಿದೆ. ಪರಕೀಯ ದೊರೆಗಳ ಕ್ರೌರ್ಯವನ್ನು ಬಲವಾಗಿ ವಿರೋಧಿಸಿದ ವೀರ್ ಸಿಧು ಮತ್ತು ಕನ್ಹು ಸಹಸ್ರಾರು ಸಂತಾಲಿ ಸಂಗಡಿಗರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಇದೇ ದಿನ ಎಂದು ನೆನಪು ಮಾಡಿಕೊಂಡಿದ್ದಾರೆ
೧೮೫೫ರ ಜೂನ್ ೩೦ ರ ದಿನ ನೆನಪಿದೆಯಾ,೧೮೫೭ ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವರ್ಷಗಳ ಹಿಂದೆ, ಜಾರ್ಖಂಡ್‌ನ ಸಂತಾಲ್ ಪರಗಾನಾದಲ್ಲಿ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ವಿದೇಶಿ ಆಡಳಿತಗಾರರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಿ ಬಿದ್ದರು ಎಂದು ಹೇಳಿದ್ದಾರೆ.
ಕೇರಳದ ಛತ್ರಿಗೆ ಶ್ಲಾಘನೆ
’ಮನ್ ಕಿ ಬಾತ್’ ನಲ್ಲಿ ನಿಮಗೆ ವಿಶೇಷ ರೀತಿಯ ಛತ್ರಿಯ ಬಗ್ಗೆ ಹೇಳಲು ಬಯಸುತ್ತೇನೆ. ಈ ಕೊಡೆಗಳನ್ನು ಕೇರಳದಲ್ಲಿ ತಯಾರಿಸಲಾಗುತ್ತದೆ. ಕೇರಳದ ಸಂಸ್ಕೃತಿಯಲ್ಲಿ ಛತ್ರಿಗಳಿಗೆ ವಿಶೇಷ ಮಹತ್ವವಿದೆ. ಛತ್ರಿಗಳು ಅನೇಕ ಸಂಪ್ರದಾಯಗಳು ಮತ್ತು ಆಚರಣೆಗಳ ಪ್ರಮುಖ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಛತ್ರಿ ಎಂದರೆ ’ಕರ್ತುಂಬಿ ಛತ್ರಿಗಳು’ ಮತ್ತು ಇವುಗಳನ್ನು ಕೇರಳದ ಅಟ್ಟಪ್ಪಾಡಿಯಲ್ಲಿ ಈ ಕೊಡೆಗಳನ್ನು ಕೇರಳದ ಬುಡಕಟ್ಟು ಸಹೋದರಿಯರು ತಯಾರಿಸಿದ್ದಾರೆ. ದೇಶಾದ್ಯಂತ ಈ ಛತ್ರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವುಗಳನ್ನು ಆನ್‌ಲೈನ್‌ನಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ‘ವಟ್ಟಲಕ್ಕಿ ಸಹಕಾರಿ ಕೃಷಿ ಸಂಘ’ದ ಮೇಲ್ವಿಚಾರಣೆಯಲ್ಲಿ ಈಛತ್ರಿಗಳನ್ನು ತಯಾರಿಸಲಾಗುತ್ತದೆ. ಈ ಸಮಾಜ ನಮ್ಮ ಮಹಿಳಾ ಶಕ್ತಿಯೇ ಮುನ್ನಡೆಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.