ನೂತನ ೩ ಕ್ರಿಮಿನಲ್ ಕಾಯ್ದೆ ಜಾರಿ
ಡಿಜಟಲ್ ಸಾಕ್ಷಿ ಪರಿಗಣನೆ, ತನಿಖೆಗೆ ಕಾಲಮಿತಿ ತ್ವರಿತ ನ್ಯಾಯದಾನ ಉದ್ದೇಶ

ನವದೆಹಲಿ, ಜೂ. ೩೦- ಡಿಜಿಟಲ್ ಸಾಕ್ಷ್ಯಗಳನ್ನು ಪುರಾವೆಯಾಗಿ ಪರಿಗಣಿಸುವ ಶಿಕ್ಷೆಯ ರೂಪವಾಗಿ ಸಮುದಾಯ ಸೇವೆಯನ್ನು ವಿಧಿಸುವ ಲೈಂಗಿಕ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ, ಕಾಲಮಿತಿಯಲ್ಲಿ ತನಿಖೆ ಹಾಗೂ ತ್ವರಿತ ನ್ಯಾಯ ಖಾತ್ರಿಪಡಿಸುವ ನಿಟ್ಟಿನಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ನಾಳೆಯಿಂದ ಜಾರಿಗೆಯಾಗಲಿವೆ.
ಸಮಾಜದ ಮತ್ತು ಭವಿಷ್ಯದಲ್ಲಿ ನಾಗರಿಕರ ಹಿತದೃಷ್ಠಿಯಿಂದ ಬ್ರಿಟೀಷರ ಕಾಲದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಕ್ರಿಮಿನಲ್ ಪ್ರೊಸಿಸರ್ ಕೋಡ್), ಭಾರತೀಯ ದಂಡ ಸಂಹಿತೆ (ಇಂಡಿಯನ್ ಪಿನಲ್ ಕೋಡ್) ಮತ್ತು ಭಾರತೀಯ ಸಾಕ್ಷ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್)ನ್ನು ಬದಲಿಸಿ ಭಾರತೀಯ ನ್ಯಾಯ ಸಂಹಿತ, ಭಾರತೀಯ ಸುರಕ್ಷಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ ಎಂಬ ಕ್ರಿಮಿನಲ್ ಕಾಯ್ದೆಗಳನ್ನು ರೂಪಿಸಲಾಗಿದ್ದು, ಈ ಕಾಯ್ದೆಗಳು ಜುಲೈ ೧ (ನಾಳೆ) ರಿಂದ ಜಾರಿಯಾಗಲಿವೆ.
ಈ ಹೊಸ ಕ್ರಿಮಿನಲ್ ಕಾಯ್ದೆಯಲ್ಲಿ ಡಿಜಿಟಲ್ ದಾಖಲೆಗಳನ್ನು ಪುರಾವೆಗಳನ್ನಾಗಿ ಪರಿಗಣಿಸುವ ಪ್ರಮುಖ ಬದಲಾವಣೆಯು ಇದ್ದು, ಭಾರತೀಯ ನ್ಯಾಯ ಸಂಹಿತ ದಂಡ ಕಾನೂನು ಬದಲಾವಣೆ ಮಾಡಿ ಸೆಕ್ಷನ್ ೪ರ ಅಡಿಯಲ್ಲಿ ಶಿಕ್ಷೆಯ ರೂಪವಾಗಿ ಸಮುದಾಯ ಸೇವೆಯನ್ನು ವಿಧಿಸುವ ಅಂಶವೂ ಇದೆ.
ಲೈಂಗಿಕ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವ ಅಂಶ ಹೊಸ ಕಾಯ್ದೆಗಳಲ್ಲಿ ಇದ್ದು, ಮದುವೆಗೆ ಭರವಸೆ ನೀಡುವ ಮೂಲಕ ಮೋಸದ ಲೈಂಗಿಕ ದೌರ್ಜನ್ಯದಲ್ಲಿ ತೊಡಗುವವರಿಗೆ ೧೦ ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತದೆ. ಉದ್ಯೋಗ, ಬಡ್ತಿ ಅಥವಾ ಮದುವೆಗೆ ಸಂಬಂಧಿಸಿದ ಸುಳ್ಳು ಭರವಸೆಗಳನ್ನು ಮೋಸ ಎಂದು ಪರಿಗಣಿಸಿ ಶಿಕ್ಷೆ ವಿಧಿಸುವ ಅಂಶವೂ ಈ ಕಾನೂನಿನಲ್ಲಿ ಇದೆ.
ವಿವಿಧ ಕಾನೂನು ಪ್ರಕಿಯೆಗಳಿಗೆ ನಿರ್ಧಿಷ್ಟ ಸಮಯವಕಾಶವನ್ನು ಈ ಕಾಯ್ದೆ ಕಡ್ಡಾಯಗೊಳಿಸುವುದು ಪ್ರಮುಖ ಅಂಶವಾಗಿದೆ.
ಕಾನೂನು ಬಾಹಿರ ಚಟುವಟಿಕೆಗಳ ವಿಶಾಲ ವ್ಯಾಪ್ತಿಯನ್ನು ಈ ಹೊಸ ಕಾನೂನುಗಳು ಒಳಗೊಂಡಿದೆ. ಈ ಚಟುವಟಿಕೆಗಳಲ್ಲಿ ಅಪಹರಣ, ದರೋಡೆ, ವಾಹನ ಕಳ್ಳತನ, ಸುಲಿಗೆ, ಭೂಕಬಳಿಕೆ, ಗುತ್ತಿಗೆ ಹತ್ಯೆ, ಆರ್ಥಿಕ ಅಪರಾಧಗಳು, ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳ ಸಾಗಣೆ, ಔಷಧಗಳು, ಶಸ್ತ್ರಾಸ್ತ್ರಗಳು ಹಾಗೂ ಅಕ್ರಮ ಸರಕು ಸೇವೆಗಳು ಸೇರಿವೆ.
ವೇಶ್ಯಾವಾಟಿಕೆ ಅಥವಾ ಸುಲಿಗೆಗಾಗಿ ಮಾನವ ಕಳ್ಳ ಸಾಗಣೆ ನಿರ್ವಹಿಸುವ ವ್ಯಕ್ತಗಳು ಅಥವಾ ಗುಂಪುಗಳಿಗೆ ತೀವ್ರ ಶಿಕ್ಷೆ ವಿಧಿಸುವ ಕಾನೂನನ್ನು ಈ ಹೊಸ ಕಾನೂನುಗಳು ಒಳಗೊಂಡಿದ್ದು, ಬೆದರಿಕೆ, ದಬ್ಬಾಳಿಕೆ, ನೇರ ಅಥವಾ ಪರೋಕ್ಷ ಲಾಭಕ್ಕಾಗಿ ಕಾನೂನು ಬಾಹಿರ ವಿಧಾನಗಳ ಮೂಲಕ ಕಾರ್ಯಗತಗೊಳಿಸಲಾದ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ.
ರಾಷ್ಟ್ರೀಯ ಭದ್ರತೆಯೊಡ್ಡುವ ಕೃತ್ಯಗಳಿಗೆ ಜನರಲ್ಲಿ ಭಯೋತ್ಪಾದನೆಯನ್ನು ಒಡೆಯುವ ಉದ್ದೇಶದಿಂದ ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಅಥವಾ ಭದ್ರತೆಗೆ ಬೆದರಿಕೆ ಹಾಗೂ ಯಾವುದೇ ಚಟುವಟಿಕೆ ಭಯೋತ್ಪಾದನಾ ಕೃತ್ಯ ಎಂದು ಈ ಹೊಸ ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ.
ಗುಂಪು ಹತ್ಯೆಗೂ ಮರಣ ದಂಡನೆ ಅಥವಾ ಜೀವವಾಧಿ ಶಿಕ್ಷೆ ವಿಧಿಸುವ ಅಂಶವೂ ಹೊಸ ಕಾನೂನುಗಳಲ್ಲಿದ್ದು, ೫ ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪು ನಿರ್ವಹಿಸುವ ಅಪರಾಧಗಳಿಗೆ ಈ ಶಿಕ್ಷೆ ವಿಧಿಸುವ ಜತೆಗೆ ದಂಡವನ್ನು ಗುಂಪಿನ ಪ್ರತಿಯೊಬ್ಬ ಸದಸ್ಯರಿಗೂ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
೧೯೭೩ರ ಕ್ರಿಮಿನಲ್ ಪ್ರೊಸ್ಯೂಸರ್ ಕೋಡನ್ನು ಬದಲಿಸಿ ಭಾರತೀಯ ನಾಗರಿಕ ಸಂಹಿತಾ ಕಾನೂನನ್ನು ಜಾರಿ ಮಾಡಲಾಗುತ್ತಿದ್ದು, ವಿಚಾರಣಾ ಕೈದಿಗಳಿಗೆ ಜೀವಾವಧಿ ಶಿಕ್ಷೆ ಅಥವಾ ಬಹು ಆರೋಪಗಳನ್ನು ಹೊಂದಿರುವ ಪ್ರಕರಣಗಳನ್ನು ಹೊರತುಪಡಿಸಿ ಮೊದಲ ಬಾರಿಗೆ ಅಪರಾಧಿಗಳು ತಮ್ಮ ಗರಿಷ್ಠ ಶಿಕ್ಷೆಯ ಮೂರನೇ ಒಂದು ಭಾಗವನ್ನು ಪೂರೈಸಿದ ನಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತದೆ.
ಪ್ಲೋರೆನ್ಸಿಕ್ ತನಿಖೆಯು ಕನಿಷ್ಠ ೭ ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಿಗಳಿಗೆ ಕಡ್ಡಾಯವಾಗಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ತ್ವರಿತ ತನಿಖೆ ಮತ್ತು ನ್ಯಾಯ ಸಿಗಲು ಈ ಕಾಯ್ದೆ ಅವಕಾಶ ಮಾಡಿಕೊಟ್ಟಿದ್ದು, ಅತ್ಯಾಚಾರ ಸಂತ್ರಸ್ತರನ್ನು ಪರೀಕ್ಷಿಸುವ ವೈದ್ಯರು ೭ ದಿನದೊಳಗೆ ತನಿಖಾಧಿಕಾರಿಗೆ ವರದಿ ಸಲ್ಲಿಸಬೇಕು. ವಾದಗಳನ್ನು ಪೂರ್ಣಗೊಳಿಸಿದ ೩೦ ದಿನಗಳಲ್ಲಿ ತೀರ್ಪು ನೀಡಬೇಕು. ೯೦ ದಿನಗಳಲ್ಲಿ ತನಿಖೆಯ ಪ್ರಗತಿಯನ್ನು ಸಂತ್ರಸ್ತರಿಗೆ ತಿಳಿಸಬೇಕು. ಸೆಷನ್ಸ್ ನ್ಯಾಯಾಲಯಗಳು ಅಂತಹ ಆರೋಪಗಳ ಮೊದಲ ವಿಚಾರಣೆಯಿಂದ ೬೦ ದಿನಗಳಲ್ಲಿ ಆರೋಪಗಳನ್ನು ರೂಪಿಸಬೇಕಾಗುತ್ತದೆ.
ಕ್ರಿಮಿನಲ್ ಪ್ರೊಸಿಸರ್ ಕೋಡ್ ಭಾರತದಲ್ಲಿ ಕ್ರಿಮಿನಲ್ ವಿಷಯಗಳನ್ನು ನಿರ್ಣಯಿಸಲು ನ್ಯಾಯಾಲಯಗಳ ಶ್ರೇಣಿಯನ್ನು ಸ್ಥಾಪಿಸುತ್ತದೆ. ಇವುಗಳ ಸಹಿತ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು, ಅಧೀನ ನ್ಯಾಯಾಲಯಗಳು ಹೆಚ್ಚಿನ ಅಪರಾಧ ಪ್ರಕರಣಗಳ ವಿಚಾರಣೆಯನ್ನು ನಿರ್ವಹಿಸುತ್ತವೆ. ಉಚ್ಛ ನ್ಯಾಯಾಲಯಗಳು ಕ್ರಿಮಿನಲ್ ಮೊಕದ್ದಮೆಗಳು, ವಿಚಾರಣೆ ಮಾಡಲು ಹಾಗೂ ನಿರ್ಧರಿಸಲು ಅಂತರ್ಗತ ನ್ಯಾಯ ವ್ಯಾಪ್ತಿಯನ್ನು ಹೊಂದಿವೆ.
ಸುಪ್ರೀಂ ಕೋರ್ಟ್ ಉಚ್ಛ ನ್ಯಾಯಾಲಯಗಳಿಂದ ಮೇಲ್ಮನವಿಯನ್ನು ಆಲಿಸುತ್ತವೆ ಮತ್ತು ಕೆಲ ವಿಷಯಗಳಲ್ಲಿ ತನ್ನ ಮೂಲ ಅಧಿಕಾರ ವ್ಯಾಪ್ತಿಯನ್ನು ಸಹ ಚಲಾಯಿಸುತ್ತದೆ.
ನಾಳೆಯಿಂದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯು ಜಾರಿಯಾಗಲಿವೆ.
ಬ್ರಿಟೀಷರ ಕಾಲದ ಅಪರಾಧ ಕಾಯ್ದೆಗಳ ಬದಲು ಈ ಮೂರು ಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ತ್ವರಿತ ನ್ಯಾಯ ಒದಗಿಸುವ ಉದ್ದೇಶ ಈ ಕಾನೂನು ಜಾರಿಯಲ್ಲಿದೆ.
ಈ ಮೂರು ಕ್ರಿಮಿನಲ್ ಕಾಯ್ದೆಗಳನ್ನು ಕಳೆದ ವರ್ಷ ಆಗಸ್ಟ್‌ನಲ್ಲೇ ಸಂಸತ್ ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಸಹ ಪಡೆಯಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಜುಲೈ ೧ ರಿಂದ ಈ ಕಾನೂನುಗಳು ಜಾರಿಯಾಗುತ್ತವೆ ಎಂಬ ಅಧಿಸೂಚನೆಯನ್ನು ಹೊರಡಿಸಿತ್ತು.