ಶೀಘ್ರ ಫಿಲಂ ಸಿಟಿ ಶಂಕುಸ್ಥಾಪನೆ
ಬೆಂಗಳೂರು: ಕನ್ನಡ ಓಟಿಟಿ ವೇದಿಕೆ ನಿರ್ಮಿಸಲು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಫಿಲಂ ಸಿಟಿ ನಿರ್ಮಾಣ ಸೇರಿದಂತೆ ಕನ್ನಡ ಚಲನಚಿತ್ರರಂಗದ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಸೌಲಭ್ಯ ನೀಡಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ನಗರದ ಶಿವಾನಂದ ಸರ್ಕಲ್ ಬಳಿ ನೂತನವಾಗಿ ನಿರ್ಮಿಸಿರುವ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಫಿಲಂ ಸಿಟಿ ನಿರ್ಮಾಣ ಡಾ.ರಾಜ್‌ಕುಮಾರ್ ಅವರ ಕನಸು ಅವರ ಕನಸಿನಂತೆ ಫಿಲಂಸಿಟಿ ನಿರ್ಮಾಣ ಮಾಡಲಾಗುವುದು ಎಂದರು.
೧೯೮೨ರಿಂದ ನಿರ್ಮಾಪಕ ಸಂಘ ಅಸ್ತಿತ್ವದಲ್ಲಿದೆ. ೪೨ವರ್ಷಗಳ ನಂತರ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ನಿರ್ಮಾಪಕರು ಒಳ್ಳೆಯ ಸಿನೆಮಾಗಳನ್ನು ನೀಡಿ ಆರ್ಥಿಕವಾಗಿ ಸದೃಢರಾಗಲಿ ಎಂದು ಶುಭ ಹಾರೈಸಿದರು.
ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೇ.೫೦ರಷ್ಟು ತೆರಿಗೆ ವಿನಾಯಿತಿ ನೀಡಿದ್ದರು. ದೇವೇಗೌಡರ ಸಂಪುಟದಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗ ಪೂರ್ಣ ತೆರಿಗೆ ವಿನಾಯಿತಿ ನೀಡಿದ್ದರು.
೨೦೧೯ರಿಂದ ಇಲ್ಲಿಯವರೆಗೂ ನಿರ್ಮಾಪಕರಿಗೆ ಸಬ್ಸಿಡಿ ಬಂದಿಲ್ಲ, ಪ್ರಶಸ್ತಿ ನೀಡಿಲ್ಲ ಅದರ ಬಗ್ಗೆ ನೀವು ಗಮನ ಹರಿಸಿ, ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿಸಬೇಕು. ಮಲ್ಟಿಫೆಕ್ಸ್‌ಗೆ ದರ ನಿಗದಿ ಬಗ್ಗೆ ಕೋರ್ಟ್ ನಲ್ಲಿ ಸ್ಟೇ ಇದೆ.ವಾರ್ತಾ ಇಲಾಖೆಯಿಂದ ಅನ್ ಲೈನ್ ಟಿಕೆಟ್ ನೀಡುವ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.
ಕೇರಳ ಮಾದರಿ ಓಟಿಟಿ ಪ್ಲಾಟ್ ಫಾರ್ಮ್ ಸರ್ಕಾರವೇ ನಡೆಸುವಂತೆ ಆಗಬೇಕು. ಫಿಲ್ಮಂ ಸಿಟಿ ನಿರ್ಮಾಣದ ಬಗ್ಗೆ ಸರ್ಕಾರ ಗಮನ ಹರಿಸಿ, ಜೊತೆಗೆ ನಿರ್ಮಾಪಕ ಸಂಘದ ಕಟ್ಟಡಕ್ಕೆ ಅನುದಾನ ಒದಗಿಸಬೇಕೆಂದು ಸಾರಾ ಗೋವಿಂದು ಮನವಿ ಮಾಡಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಮಾತನಾಡಿ, ೬ತಿಂಗಳಲ್ಲಿ ನಮ್ಮ ಚಲನಚಿತ್ರ ಓಟಿಟಿ ಹಾಗೂ ವೆಬ್‌ಸೈಟ್ ಆರಂಭಿಸಲಾಗುವುದು. ಅಕಾಡೆಮಿ ಆವರಣವನ್ನು ಚಿತ್ರರಂಗದ ಕೆಲಸ ಮಾಡಲು ಅನುಕೂಲವಾಗುವಂತೆ ಆವರಣವನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್, ಶಾಸಕ ರಿಜ್ವಾನ್ ಅರ್ಷದ್, ನಟ ಡಾ.ಶಿವರಾಜ್ ಕುಮಾರ್, ರಾಜ್ಯಸಭಾ ಸದಸ್ಯ ಜಗ್ಗೇಶ್,ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ಕರ್ನಾಟಕ ಚಲನಚಿತ್ರದ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಸೇರಿ ಪ್ರಮುಖರಿದ್ದರು.