ಕಾಂಗ್ರೆಸ್‌ನಲ್ಲಿ ‘ಹೈ’ ಇದೆ ‘ಕಮಾಂಡ್’ ಇಲ್ಲ
ಹುಬ್ಬಳ್ಳಿ, ಜೂ೩೦: ಕಾಂಗ್ರೆಸ್ ನಲ್ಲಿ ಹೈ ಅಷ್ಟೇ ಇದೆ ಕಮಾಂಡ್ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ. ಆದರೆ ಇವರು ಸರಿಯಾದ ದಿಕ್ಕಿನಲ್ಲಿ ಅಧಿಕಾರ ನಡೆಸುತ್ತಿಲ್ಲ, ಬೇಕಾಬಿಟ್ಟಿ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮ ಹಗರಣ ಅಲ್ಲದೇ ಇತ್ತೀಚೆಗೆ ಬಾಂಬ್ ಬ್ಲಾಸ್ಟ್ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹ ಇವರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಮಾಡಲು ಈ ಸರ್ಕಾರ ಯತ್ನಿಸುತ್ತಿದೆ. ಅವರದೇ ಸರ್ಕಾರದ ಭಾಗವಾಗಿರೋ ಸಚಿವರ ಮೇಲೆ ಆರೋಪಗಳಿವೆ ಎಂದು ಅವರು ನುಡಿದರು.
ಕಾಂಗ್ರೆಸ್‌ನ ಸಿಎಂ ಬದಲಾವಣೆ ವಿಚಾರದಲ್ಲಿ ಬಿಜೆಪಿ ಕೈವಾಡವಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಈ ತರಹದ ಬಾಲಿಶ ಹೇಳಿಕೆ ಸರಿಯಲ್ಲ ಎಂದು ಕಿಡಿಕಾರಿದರು. ಸಿಎಂ ಬದಲಾವಣೆ ಮಾಡುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅದನ್ನು ತಂದು ಬಿಜೆಪಿ ತಲೆಕಟ್ಟುವುದು ಸರಿಯಲ್ಲ, ಸಿಎಂ ಬದಲಾವಣೆಯ ಬಹಿರಂಗ ಚರ್ಚೆಯಿಂದ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದರು.
ಡಿಸಿಎಂ ಕೂಗಿನ ಹಿಂದೆ ಸಿಎಂ ಸಿದ್ದರಾಮಯ್ಯನವರೇ ಇದ್ದಾರೆ ಇದು ಪಕ್ಕಾ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು, ಡಿಕೆಶಿಯವರು ಡಿಸಿಎಂ ಸೃಷ್ಟಿ ಕುರಿತು ಬಹಿರಂಗ ಹೇಳಿಕೆ ಸಹಿಸಲ್ಲ ಎಂದಿದ್ದಾರೆ, ಒಟ್ಟಾರೆ ರಾಜ್ಯದಲ್ಲಿ ಸರ್ಕಾರದ ಆಡಳಿತ ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂದು ನುಡಿದರು.