ಕಾಂಗ್ರೆಸ್ ರಾಜಕಾರಣ: ಹಾದಿ ರಂಪ
ತುಮಕೂರು, ಜೂ. ೩೦- ಕಾಂಗ್ರೆಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಮತ್ತು ಮುಖ್ಯಮಂತ್ರಿ ಗದ್ದುಗೆಗಾಗಿ ನಡೆಯುತ್ತಿರುವ ಮಾತಿನ ವರಸೆಗಳು ಹಾದಿರಂಪ ಬೀದಿರಂಪದ ಮಟ್ಟಕ್ಕೆ ಹೋಗಿದ್ದು, ಪೂರ್ಣ ಬಹುಮತವನ್ನು ಕೊಟ್ಟು ಅಧಿಕಾರಕ್ಕೆ ತಂದ ಜನರು ಪಶ್ಚಾತ್ತಾಪ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಶಾಸಕ ಬಿ ಸುರೇಶ್‌ಗೌಡ ವಾಗ್ದಾಳಿ ನಡೆಸಿದ್ದಾರೆ. ಜನರ ಸಂಕಷ್ಟಕ್ಕೆ ಮಿಡಿಯದವರು ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ಅವರ ಉಪಮುಖ್ಯಮಂತ್ರಿ ಹುದ್ದೆಗೆ ಮಾತ್ರವಲ್ಲದೇ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನೇರವಾಗಿ ಸಡ್ಡು ಹೊಡೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದು ಧ್ಯೋತಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಜನಪರವಾಗಿ ಕೆಲಸ ಮಾಡಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲಿ ಎಂದು ರಾಜ್ಯದ ಜನತೆ ಒಂದು ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಆದರೆ, ಅನುಭವಿ ರಾಜಕಾರಣಿ, ೧೫ ಬಾರಿ ಬಜೆಟ್ ಮಂಡಿಸಿದ ಖ್ಯಾತಿಯ ಸಿದ್ದರಾಮಯ್ಯ ಅವರಂಥವರೇ ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯದ ಆಡಳಿತ ದಿಕ್ಕು ತಪ್ಪಿದ ಹಡಗಿನಂತೆ ಆಗಿರುವುದು ಈ ರಾಜ್ಯದ ದುರ್ದೈವ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ದಿನಾಚರಣೆಯಲ್ಲಿ ಒಕ್ಕಲಿಗರ ಮಹಾಸಂಸ್ಥಾನ ಮಠದ ಮುಖ್ಯಸ್ಥರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಬೇಕು ಎಂದು ಕರೆ ನೀಡಿರುವುದು ಗದ್ದುಗೆಯ ಗುದ್ದಾಟ ಎಲ್ಲಿಯವರೆಗೆ ಬಂದು ಮುಟ್ಟಿದೆ ಎನ್ನುವುದಕ್ಕೆ ಒಂದು ನಿದರ್ಶನವಾಗಿದೆ. ಇದು ರಾಜ್ಯದಲ್ಲಿ ಹಿಂದೆ ಎಂದೂ ಕೇಳರಿಯದ ಸಂಗತಿಯಾಗಿದೆ ಎಂದಿದ್ದಾರೆ.
?ನಿತ್ಯವೂ ಹೈಕಮಾಂಡ್ ಜಪ ಮಾಡುವಂಥ ಒಂದು ಪಕ್ಷದಲ್ಲಿ ರಾಜ್ಯದ ಕಾಂಗ್ರೆಸ್ ಧುರೀಣರು ಹಾದಿ ಬೀದಿಯಲ್ಲಿ ಪಕ್ಷದ ವಿದ್ಯಮಾನಗಳನ್ನು ಚರ್ಚೆ ಮಾಡುತ್ತಿರುವುದು ಆ ಪಕ್ಷದಲ್ಲಿ ನಾಯಕತ್ವೇ ಇಲ್ಲ ಎನ್ನುವುದರ ಸಂಕೇತವಾಗಿದೆ. ಆ ವಿದ್ಯಮಾನಗಳ ಬಗ್ಗೆ ನಮ್ಮ ಪಕ್ಷಕ್ಕೆ ಏನೂ ಸಂಬಂಧವಿಲ್ಲ. ಬೇಕಾದರೆ ಅವರು ಬೀದಿಗೆ ಇಳಿದು ಹೊಡೆದಾಡಲಿ. ಆದರೆ, ರಾಜ್ಯದ ಜನರ ನಿತ್ಯದ ಕಷ್ಟಗಳ ಬಗ್ಗೆ ನಮ್ಮ ಪಕ್ಷಕ್ಕೆ ಚಿಂತೆಯಿದೆ ಎಂದು ಹೇಳಿದ್ದಾರೆ.
ಹುಸಿ ಗ್ಯಾರಂಟಿ ಯೋಜನೆಗಳ ಬಗ್ಗೆ ನಿತ್ಯವೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಒಂದೊಂದೇ ಬೆಲೆ ಏರಿಸುತ್ತಿದ್ದಾರೆ. ಈಗಲೇ ಸಂಕಷ್ಟದಲ್ಲಿ ಇರುವ ಜನರು ಇನ್ನಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯದಲ್ಲಿ ಇದೀಗ ಮುಂಗಾರು ಮಳೆ ಬೀಳುತ್ತಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಆಗಬೇಕು. ಅವರು ಸಕಾಲದಲ್ಲಿ ಬಿತ್ತನೆ ಮಾಡಿ ಬೆಳೆ ತೆಗೆಯಬೇಕು. ಆ ದಿಸೆಯಲ್ಲಿ ಸರ್ಕಾರದ ಮಟ್ಟದಲ್ಲಿ ಯಾವ ಚಿಂತನೆಯೂ ನಡೆದಂತೆ ಕಾಣುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸರ್ಕಾರದಲ್ಲಿ ಅಂತಃಕಲಹ ಮೇರೆ ಮೀರಿದ್ದು, ದುರ್ಬಲವಾಗಿರುವ ಕಾಂಗ್ರೆಸ್ ಹೈಕಮಾಂಡ್ ಅದನ್ನು ನಿಯಂತ್ರಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಈ ಸರ್ಕಾರ ಇಸ್ಪೀಟು ಎಲೆಗಳ ಸೌಧದ ಹಾಗೆ ಇನ್ನೇನು ಕುಸಿದು ಬೀಳಲಿದೆ. ಲೋಕಸಭೆಯ ಚುನಾವಣೆಯಲ್ಲಿ ಎರಡು ಅಂಕಿ ದಾಟದಂತೆ ಕಾಂಗ್ರೆಸ್ ಸದಸ್ಯರನ್ನು ಗೆಲ್ಲಿಸಿರುವುದು ಕರ್ನಾಟಕದ ಭವಿಷ್ಯದ ರಾಜಕಾರಣದ ದಿಕ್ಕಿನ ಮುನ್ಸೂಚನೆಯಂತೆ ಇದೆ. ಬಿಜೆಪಿ-ಜೆಡಿಎಸ್ ಮೈತ್ರಿಯು ಮುಂದಿನ ದಿನಗಳಲ್ಲಿ ಬರಲಿರುವ ಜನಪರ ಸರ್ಕಾರಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.