ಕವಿತಾ ಜಾಮೀನು,ನಾಳೆ ತೀರ್ಪು
ನವದೆಹಲಿ,ಜೂ.೩೦-ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಮತ್ತು ಇಡಿ ಪ್ರಕರಣಗಳಲ್ಲಿ ಭಾರತ ರಾಷ್ಟ್ರ ಸಮಿತಿ ನಾಯಕಿ ಕೆ.ಕವಿತಾ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ದೆಹಲಿ ಹೈಕೋರ್ಟ್ ನಾಳೆ ತೀರ್ಪು ನೀಡಲಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರ ನ್ಯಾಯಪೀಠ ಎಲ್ಲಾ ಕಡೆಯ ಸಲ್ಲಿಕೆಗಳನ್ನು ಆಲಿಸಿದ ನಂತರ, ಮೇ ೨೮, ರಂದು ಈ ವಿಷಯದಲ್ಲಿ ಆದೇಶ ಕಾಯ್ದಿರಿಸಿದ್ದು, ನಾಳೆ ಯಾವ ತೀರ್ಪು ಹೊರ ಬೀಳಲಿದೆ ಎನ್ನವುದು ಕುತೂಹಲ ಕೆರಳಿಸಿದೆ. ಕವಿತಾ ಪರ ಹಿರಿಯ ವಕೀಲ ವಿಕ್ರಮ್ ಚೌಧರಿ ಮತ್ತು ನಿತೇಶ್ ರಾಣಾ ವಾದ ಮಂಡಿಸಿದ್ದರು. ಕವಿತಾ ಪರವಾಗಿ ವಕೀಲರಾದ ಮೋಹಿತ್ ರಾವ್ ಮತ್ತು ದೀಪಕ್ ನಗರ್ ಕೂಡ ಹಾಜರಾಗಿದ್ದರು. ಸಿಬಿಐ ಪರವಾಗಿ ವಕೀಲ ಡಿ.ಪಿ.ಸಿಂಗ್ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ವಕೀಲ ಜೊಹೆಬ್ ಹುಸೇನ್ ಹಾಜರಾಗಿದ್ದರು.
ದೆಹಲಿ ಅಬಕಾರಿ ನೀತಿ ಅನುಷ್ಟಾನ ಪ್ರಕರಣಕ್ಕೆ ಸಂಬಂದಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಇಸೋಡಿಯಾ ಸೇರಿದಂತೆ ಹಲವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿದ್ದು ಪ್ರಮುಖ ಆರೋಪಿಗಳು ಜೈಲಿನಲ್ಲಿ ಇದ್ದಾರೆ.