ಬಹು ಸಂಖ್ಯಾತರಿಗೆ ಮನ್ನಣೆ ನೀಡಲು ಲಿಂಗಾಯತರಿಗೆ ಸಿಎಂ ಸ್ಥಾನ ನೀಡಿ: ರಂಭಾಪುರಿ ಶ್ರೀ
ಕಲಬುರಗಿ,ಜೂ.29-ಕರ್ನಾಟಕದಲ್ಲಿರುವ ಬಹುಸಂಖ್ಯಾತ ವೀರಶೈವ ಲಿಂಗಾಯತರಿಗೆ ಮಾನ್ಯತೆ ದೊರಕುವಂತಾಗಲು ಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೆ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು 1008 ಡಾ.ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ.ವೀರೇಂದ್ರ ಪಾಟೀಲ ಅವರನ್ನು ಹೊರತು ಪಡಿಸಿದರೆ ರಾಜ್ಯದಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್‍ನಿಂದ ವೀರಶೈವ ಲಿಂಗಾಯತ ಸಮುದಾಯದ ಮತ್ಯಾರು ಸಿಎಂ ಆಗಿಲ್ಲ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಹು ಸಂಖ್ಯಾತ ವೀರಶೈವ ಲಿಂಗಾಯತ ಲಿಂಗಾಯತರು ಹೆಚ್ಚಿನ ಮತಗಳನ್ನು ನೀಡಿ ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತರು ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.
ವೀರಶೈವ ಲಿಂಗಾಯತರಲ್ಲಿ ಹಿರಿಯ ಹಾಗೂ ಕಿರಿಯ ಸಕ್ರೀಯ ರಾಜಕಾರಣಿಗಳಿದ್ದು, ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ ಸೇರಿದಂತೆ ಅನೇಕ ಜನ ಪ್ರಭಾವಿ ರಾಜಕಾರಣಿಗಳಿದ್ದು, ಅವರೊಬ್ಬರಲ್ಲಿ ಯಾರಿಗಾದರೂ ಮನ್ನಣೆ ನೀಡುವುದು ಒಳಿತು. ಆದರೆ, ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಸ್ಥಾನ ಬದಲಿ ಮಾಡದಿದ್ದರೆ ಈಗಾಗಲೇ ಹೇಳಿಕೆಗಳು ಬರುತ್ತಿರುವಂತೆ ಲಿಂಗಾಯತರೊಬ್ಬರಿಗೆ ಡಿಸಿಎಂ ಸ್ಥಾನ ನೀಡಿದರೆ ಈ ಸಮುದಾಯಕ್ಕೆ ಮನ್ನಣೆ ನೀಡಿದಂತಾಗುತ್ತದೆ. ಮಹಾರಾಷ್ಟ್ರದಲ್ಲಿ ಸಂಪ್ರದಾಯದಂತೆ ಅಲ್ಲಿನ ಸರ್ಕಾರ ಮರಾಠಿಗರಿಗೆ ಪ್ರಾತಿನಿಧ್ಯ ನೀಡಿದಂತೆ ಇಲ್ಲಿ ವೀರಶೈವ ಲಿಂಗಾಯತರಿಗೆ ಅವಕಾಶ ನೀಡಿ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ಜಗದ್ಗುರುಗಳು ಒತ್ತಾಯಿಸಿದ್ದಾರೆ.
ಗ್ಯಾರೆಂಟಿ ಯೋಜನೆ ಪುನರ್ ಪರಿಶೀಲನೆ ಅಗತ್ಯ
ರಾಜ್ಯದಲ್ಲಿ ಅಭಿವೃದ್ಧಿ ವೇಗ ಪಡೆಯಲು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪುನರ್ ಪರಿಶೀಲನೆ ಮಾಡುವುದು ಒಳಿತು ಎಂದು ರಂಭಾಪುರಿ ಶ್ರೀಗಳು ಹೇಳಿದರು. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳಾದ ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಬಗ್ಗೆ ಮರು ಪರಿಶೀಲಿಸಿ ಉಚಿತವೆನ್ನುವ ಯೋeನೆಗಳಿಗೆ ಕೋಕ್ ನೀಡಿದರೆ, ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ. ರಾಜ್ಯದ ಸರ್ವಾಂಗೀಣ ವಿಕಾಸಕ್ಕೂ ಇದು ಸಹಕಾರಿಯಾಗಲಿದೆ ಎಂದ ಅವರು, ರಾಜ್ಯದ ಎಲ್ಲ ಚುನಾಯಿತ ಶಾಸಕರು ಅಭಿವೃದ್ಧಿ ಮಾತುಗಳಿಗೆ ಒತ್ತು ನೀಡಿ, ಕ್ಷುಲ್ಲಕ ರಾಜಕಾರಣಕ್ಕೆ ಇತಶ್ರೀ ಹೇಳಬೇಕು. ರಾಜ್ಯದ ಜನರ ಹಿತ ಕಾಪಾಡಲು ಅಭಿವೃದ್ಧಿ ಮಂತ್ರ ಜಪಿಸಬೇಕು ಎಂದು ಜಗದ್ಗುರುಗಳು ಹೇಳಿದರು.