ಬಾಯಿಬಿಟ್ಟರೆ ಜೋಕೆ: ಡಿಕೆಶಿ
ಬೆಂಗಳೂರು, ಜೂ. ೨೯- ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಲೀ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆಯಾಗಲೀ ಪಕ್ಷದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಬಾರದು. ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಪಕ್ಷಕ್ಕೆ ಒಳ್ಳೆಯದಲ್ಲ. ಪಕ್ಷಕ್ಕೆ ಒಳ್ಳೆಯದಾಗಬೇಕು ಎಂದಾದರೆ ಯಾವುದೇ ಸಚಿವರಿರಲಿ, ಶಾಸಕರಿರಲಿ ಯಾರೂ ಈ ಬಗ್ಗೆ ಮಾತನಾಡಕೂಡದು. ಮಾತನಾಡಿದರೆ ನೋಟಿಸ್ ನೀಡಿ, ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದರು.ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಶಿಸ್ತಿಲ್ಲದೆ ಯಾವುದೇ ಪಕ್ಷವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇಂದು ಸುಖಾಸುಮ್ಮನೆ ಮಾತನಾಡುವ ಅಗತ್ಯತೆ ಇಲ್ಲ ಎಂದರು.ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥಸ್ವಾಮೀಜಿ ಅವರು ನನ್ನ ಮೇಲೆ ಅಭಿಮಾನಕ್ಕೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಿ ಎಂದು ಹೇಳಿದ್ದಾರೆ ಅಷ್ಟೆ. ನಾನು ಸ್ವಾಮೀಜಿಗಳಲ್ಲಿ ಮನವಿ ಮಾಡುತ್ತೇನೆ ಯಾರೂ ಈ ರೀತಿ ಮಾತನಾಡುವುದು ಬೇಡ. ನಾನು ಸಿಎಂ ಆಗಲು ನನಗೆ ಯಾರ ಶಿಫಾರಸ್ಸು ಬೇಡ. ನಾನು ೩೫ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ, ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಕೆಲಸವನ್ನು ನೋಡಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಹೆಚ್ಚುವರಿ ಡಿಸಿಎಂ ಬಗ್ಗೆ ಕೆಲವರು ಹೇಳಿಕೆ ಕೊಡುತ್ತಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಇದರ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ. ಇಷ್ಟು ಹೇಳಿದ ಮೇಲೂ ಯಾರಾದರೂ ಮಾತನಾಡಿದರೆ ವಿಧಿ ಇಲ್ಲದೆ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದರು.ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಕೆಲ ಸ್ವಾಮೀಜಿಗಳು ಸಿಎಂ ಹುದ್ದೆ ಬಗ್ಗೆ ಮಾತನಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಇವತ್ತೆ ಮಾತನಾಡಿರುವುದು. ಎಲ್ಲ ಸ್ವಾಮೀಜಿಗಳಲ್ಲೂ ನಾನು ಕೈ ಮುಗಿದು ಮನವಿ ಮಾಡುತ್ತೇನೆ. ನಮ್ಮ ರಾಜಕಾರಣ ಸುದ್ದಿಗೆ ನೀವು ಬರಬೇಡಿ. ರಾಜಕಾರಣ ನಾವು ಮಾಡುತ್ತೇವೆ. ನಿಮಗೆ ಅಭಿಮಾನ ಇದ್ದರೆ ಮನಸ್ಸಿನಲ್ಲೆ ಆಶೀರ್ವಾದ ಮಾಡಿ ಎಂದು ಕೋರುತ್ತೇನೆ ಎಂದರು.ಯಾವುದೇ ಸ್ವಾಮೀಜಿಗಳು ಎಂದೂ ಈ ರೀತಿ ಹೇಳಿಲ್ಲ. ಈಗಷ್ಟೇ ಚಂದ್ರಶೇಖರನಾಥಸ್ವಾಮೀಜಿ ಅವರು ಅಭಿಮಾನಕ್ಕೆ ಆ ರೀತಿ ಹೇಳಿದ್ದಾರೆ ಆದರೆ ಎಲ್ಲವನ್ನು ಪಕ್ಷ ತೀರ್ಮಾನಿಸುತ್ತದೆ ಎಂದರು.ರಾಜ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಾನು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಸೇರಿದಂತೆ ವರಿಷ್ಠರು ಕುಳಿತು ಒಂದು ತೀರ್ಮಾನ ಮಾಡಿದ್ದೇವೆ. ಅದರಂತೆ ಸರ್ಕಾರ ರಚನೆ ಮಾಡಿ ಆಡಳಿತ ಮಾಡುತ್ತಿದ್ದೇವೆ. ಅನಗತ್ಯವಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಈ ಬಗ್ಗೆ ಎಲ್ಲ ಮಾತನಾಡಿ ಪಕ್ಷಕ್ಕೆ ಹಾನಿ ಮಾಡುವುದು ಬೇಡ ಎಂದರು.ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಚಂದ್ರಶೇಖನಾಥಸ್ವಾಮೀಜಿಗಳಿಂದ ಯಾರೋ ಹೇಳಿದ್ದಾರೆ ಎಂದು ದೆಹಲಿಯ ಕರ್ನಾಟಕ ಭವನದ ಲಿಫ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿರುವ ಆಡಿಯೋ ಧ್ವನಿ ವೈರಲ್ ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತಿಲ್ಲ ನಾವಂತೂ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತಿದ್ದೇವೆ. ಸುಮ್ಮನೆ ಅನಗತ್ಯವಾಗಿ ಮುಖ್ಯಮಂತ್ರಿ ಬದಲಾವಣೆ, ಉಪಮುಖ್ಯಮಂತ್ರಿ ಸೃಷ್ಟಿ ಈ ಎಲ್ಲದರ ಬಗ್ಗೆ ಮಾತನಾಡಬಾರದು. ಶಾಸಕರಿರಲಿ, ಸಚಿವರಿರಲಿ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಇಲ್ಲದಿದ್ದರೆ ಎಐಸಿಸಿಯಿಂದ ನೋಟಿಸ್ ಕೊಡಿಸಿ ಶಿಸ್ತು ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಶಿವಕುಮಾರ್ ಕಠೋರ ಧ್ವನಿಯಲ್ಲಿ ಹೇಳಿದರು.ನಾನು ಎಲ್ಲರಿಗೂ ಸ್ವಾಮೀಜಿ ಸೇರಿದಂತೆ ಕೈ ಮುಗಿದು ಮನವಿ ಮಾಡುತ್ತೇನೆ. ಯಾರೂ ನನ್ನ ಬಗ್ಗೆ ಶಿಫಾರಸ್ಸು ಮಾಡುವುದು ಬೇಡ. ರಾಜಕಾರಣವನ್ನು ನಮಗೆ ಬಿಟ್ಟುಬಿಡಿ ಎಂದು ಕೋರುತ್ತೇನೆ. ಅಭಿಮಾನ ಇರಲಿ. ನನಗೂ ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ಅವರ ಆಶೀರ್ವಾದ ಇದ್ದರೆ ಜನತೆಗೂ ನಾನು ಏನು ಮಾಡಿದ್ದೇನೆ. ಪಕ್ಷಕ್ಕಾಗಿ ಎಷ್ಟು ದುಡಿದ್ದೇನೆ ಎಲ್ಲವೂ ಗೊತ್ತಿದೆ. ವರಿಷ್ಠರಿಗೂ ಎಲ್ಲವೂ ಮನವರಿಕೆಯಾಗಿದೆ. ಹಾಗಾಗಿ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸಲ್ಲದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಒಂದು ವೇಳೆ ಮತ್ತೆ ಶಾಸಕರು, ಸಚಿವರುಗಳು ಈ ಬಗ್ಗೆ ಮಾತನಾಡಿದರೆ ವಿಧಿ ಇಲ್ಲದೆ ಶಿಸ್ತು ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಪುನರುಚ್ಛರಿಸಿದರು.
ದೆಹಲಿ ಭೇಟಿ ಉತ್ತಮ ಸ್ಪಂದನೆ
ದೆಹಲಿಯಲ್ಲಿ ನಿನ್ನೆ ಮತ್ತು ಮೊನ್ನೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದರ ಸಭೆ ನಡೆಸಿ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ರಾಜ್ಯಕ್ಕೆ ಆಗಬೇಕಾಗಿರುವ ಕೆಲಸ, ಅನುದಾನ ಬಿಡುಗಡೆ ಎಲ್ಲದರ ಬಗ್ಗೆಯೂ ಮನವಿ ಮಾಡಿದ್ದೇನೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರಲ್ಲೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಮಾರು ೨ ಗಂಟೆಗಳ ಕಾಲ ಸಭೆ ನಡೆಸಿ ಕರ್ನಾಟಕಕ್ಕೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಆಸಕ್ತಿ ತೋರಿದ್ದಾರೆ. ಅವರಿಗೆ ನಾನು ಕೃತಜ್ಞತೆ ಹೇಳುತ್ತೇನೆ ಎಂದರು.ಇಂದು ರಾತ್ರಿ ಪ್ರಧಾನಿ ಮೋದಿ ಅವರ ಭೇಟಿ ಇದೆ. ಹಾಗಾಗಿ ನಾನು ಮತ್ತೆ ದೆಹಲಿಗೆ ಹೋಗುತ್ತಿದ್ದೇನೆ. ಮುಖ್ಯಮಂತ್ರಿಗಳ ಜತೆ ಸೇರಿ ಪ್ರಧಾನಿಗಳನ್ನು ಭೇಟಿ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.