ನಾಗೇಂದ್ರ ಬಂಧನಕ್ಕೆ ಶ್ರೀರಾಮುಲು ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ. ೨೯- ಮಹರ್ಷಿ ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರನ್ನು ಬಂಧಿಸಲು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿನ್ನೆಯಿಂದ ಹಗಲು ರಾತ್ರಿ ಧರಣಿ ನಡೆಸಿರುವ ಅವರು ಸಂಜೆವಾಣಿಯೊಂದಿಗೆ ಮಾತನಾಡಿ ಎಸ್ಟಿ ಅಭಿವೃದ್ದಿ ನಿಗಮದ ಸಚಿವರಾಗಿದ್ದ ಶಾಸಕ ನಾಗೇಂದ್ರ ಅವರನ್ನು ಬಂಧಿಸಬೇಕು. ಅಕ್ರಮ ಬಳಕೆಯ ಸಂಪೂರ್ಣ ಹಣ ರಿಕವರಿ ಆಗಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಕರಣದಲ್ಲಿ ಸಾವನ್ನಪ್ಪಿದ ಚಂದ್ರಶೇಖರ ಕುಟುಂಬಕ್ಕೆ ಪರಿಹಾರ ನೀಡಬೇಕು.
ಇದರಂತೆ ಇನ್ನಿತರೇ ನಿಗಮಗಳಲ್ಲಿನ ಹಣದ ವರ್ಗಾವಣೆ ಕುರಿತು ತನಿಖೆ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆಂದರು.
ಇಷ್ಟು ದಿನ ಇಲ್ಲದ ಎಸ್‌ಐಟಿ ತಂಡ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸದ ಬಳಿಕ ಸಕ್ರಿಯವಾಗಿದೆ. ನಿನ್ನೆ ನಿಗಮದ ಎಂಡಿ ಬಳಿಯಿಂದ ಕೋಟಿಗಟ್ಟಲೇ ಹಣ ಜಪ್ತಿ ಮಾಡಿದೆ ಲ್ಯಾಂಬೋರ್ಗಿನ ಕಾರ್ ಜಪ್ತಿ ಮಾಡಲಾಗಿದೆ. ಇದನ್ನು ಕಳೆದೊಂದು ತಿಂಗಳಿಂದ ಯಾಕೆ ಇಷ್ಟೊಂದು ಹಣ ಜಪ್ತಿ ಮಾಡಿರಲಿಲ್ಲ ಎಂದ ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಕೇವಲ ಅಧಿಕಾರಿಗಳಷ್ಟೇ ಅಲ್ಲದೇ ಮಾಜಿ ಸಚಿವ ನಾಗೇಂದ್ರ ಮತ್ತು ಕಾಣದ ಮತ್ತಷ್ಟು ಕೈಗಳಿವೆ. ನಿಗಮದ ಹಣ ಲೂಟಿ ಹೊಡೆಯಲು ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಇಲ್ಲವಾದ್ರೇ ಸಿದ್ದರಾಮಯ್ಯ ಅವರನ್ನು ಅನುಮಾನಿಸಬೇಕಾಗ್ತದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲವಾದ್ರೇ ಸಿಬಿಐಗೆ ವಹಿಸಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.
ನಾಗೇಂದ್ರ ಬಂಧನವಾಗೋವರೆಗೂ ಹೋರಾಟ ನಿಲ್ಲೋದಿಲ್ಲ ಅದಕ್ಕಾಗಿ.ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ, ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಸೇರಿದಂತೆ ಇನ್ನಿತರ ಹೋರಾಟ ಮಾಡುವ ಚಿಂತನೆ ಎಂದರು.
ರಾತ್ರಿಯೀಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಲಗಿದ್ದ ಶ್ರೀರಾಮುಲು ಜೊತೆಗೆ ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮುಖಂಡರುಗಳಾದ ಗುರುಲಿಂಗನಗೌಡ, ಪಾಲಣ್ಣ, ಗೋವಿಂದರಾಜುಲು, ಗುಜರಿ ಅಜೀಜ್ ಮೊದಲಾದವರು ಇದ್ದರು. ಅವರ ನೂರಾರು ಬೆಂಬಲಿಗರು ಸಾಥ್ ನೀಡಿದ್ದರು.