ಅಬಕಾರಿ ಹಗರಣ: ಕೇಜ್ರಿ ಮೂರು ದಿನ ಸಿಬಿಐ ಕಸ್ಟಡಿಗೆ
ನವದೆಹಲಿ, ಜೂ.26-ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲಾಗಿದೆ.
ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಾಧೀಶರು ಕೇಜ್ರಿವಾಲ್ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ವಿಶೇಷ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಸಿಬಿಐ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ನೀಡಿದ್ದಾರೆ.
ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ತನಿಖಾ ಸಂಸ್ಥೆ ಬುಧವಾರ ಕೇಜ್ರಿವಾಲ್ ಅವರನ್ನು ಔಪಚಾರಿಕವಾಗಿ ಬಂಧಿಸಿತ್ತು. ಇದೀಗ 3 ದಿನಗಳ ಕಾಲ ತನ್ನ ವಶಕ್ಕೆ ಪಡೆದಿದೆ.
ಕೇಜ್ರಿವಾಲ್ ಅವರ ಕಸ್ಟಡಿಗೆ ಕೋರಿ ಸಲ್ಲಿಸಿದ ಅರ್ಜಿಯಲ್ಲಿ, ಪ್ರಕರಣದಲ್ಲಿ ದೊಡ್ಡ ಪಿತೂರಿಯನ್ನು ಬಹಿರಂಗಪಡಿಸಲು ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
ಈಗಾಗಲೇ ಅಕ್ರಮ ಹಣ ವರ್ಗಾವಣೆ ಸಂಬಂಧ ಕೇಜ್ರಿವಾಲ್ ಅವರು, ಜೈಲು ಸೇರಿದ್ದಾರೆ. ಲೋಕಾಭಾ ಚುನಾವಣಾ ಸಮಯದಲ್ಲಿ ಪ್ರಚಾರ ನಡೆಸಲು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ ಎರಡರಂದು ಅವರು ಮತ್ತೆ ಶರಣಾಗಿದ್ದರು.