ದೆಹಲಿಯಲ್ಲಿ ವರ್ಷಧಾರೆಗೆ ಓರ್ವ ಬಲಿ: ಹಲವೆಡೆ ಟ್ರಾಫಿಕ್ ಜಾಮ್
ನವದೆಹಲಿ,ಜೂ.೨೮- ಮುಂಗಾರು ಮೊದಲ ಮಳೆಯಿಂದಾಗಿ ದೆಹಲಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.ಅನೇಕ ವಾಹನಗಳು ನಾಶವಾಗಿವೆ. ಗಿಡ-ಮರಗಳು ಧರೆಗುರುಳಿದ ಘಟನೆ ಜರುಗಿದೆ.ಮಳೆಯ ಅವಾಂತರಕ್ಕೆ ಒಬ್ಬರು ಬಲಿಯಾಗಿದ್ದಾರೆ. ಇನ್ನು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯಲ್ಲಿ ಮುಂಜಾನೆಯಿಂದಲೇ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದ್ದು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಎಲ್ಲಿ ನೋಡಿದರೂ ಅಲ್ಲಿ ಮೊಣಕಾಲು ಆಳದ ನೀರು ನಿಂತಿದೆ. ದೆಹಲಿಯ ರಸ್ತೆಗಳಲ್ಲಿ ಮಳೆ ನೀರು ಶೇಖರಣೆಯಾಗಿರುವುದರಿಂದ, ಸಂಚಾರ ನಿಧಾನಗೊಂಡಿದೆ ಮತ್ತು ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ರಾಜಧಾನಿಯ ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿ ತುಳುಕುತ್ತಿದ್ದು, ಜನರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿಯ ಮಧು ವಿಹಾರ್, ಭಿಕಾಜಿ ಕಾಮಾ ಪ್ಲೇಸ್, ಮೆಹ್ರೌಲಿ ಬದರ್‌ಪುರ್ ರಸ್ತೆ, ಶಾಂತಿ ಪಥ್, ಕನ್ನಾಟ್ ಪ್ಲೇಸ್, ಮಿಂಟೋ ಬ್ರಿಡ್ಜ್, ತೀನ್ ಮೂರ್ತಿ ಮಾರ್ಗ್, ಮೂಲ್‌ಚಂದ್ ಸೇರಿದಂತೆ ಹಲವು ಪ್ರದೇಶಗಳು ನೀರಿನಿಂದ ತುಂಬಿವೆ. ಮಿಂಟೋ ರಸ್ತೆಯಲ್ಲಿ ಸೇತುವೆ ಬಳಿ ನೀರು ಹೆಚ್ಚಿದ್ದರಿಂದ ನೀರಿನಲ್ಲಿ ಮುಳುಗಿದೆ.
ಭಾರೀ ಮಳೆಯು ಅನೇಕ ರೀತಿಯ ಸಮಸ್ಯೆಗಳನ್ನು ತಂದಿದೆ.ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೧ರ ಮೇಲ್ಛಾವಣಿ ಕುಸಿದಿದೆ. ಇದರಿಂದ ಸಂಚಾರಕ್ಕೂ ತೊಂದರೆಯಾಗಿದೆ.
ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಮತ್ತು ಉತ್ತರ ಕೇರಳದ ಕರಾವಳಿ ಪ್ರದೇಶಗಳಲ್ಲಿ ಟ್ರಫ್ ರಚನೆಯಾಗಿರುವುದರಿಂದ ಮತ್ತು ಮಧ್ಯ ಗುಜರಾತ್ ಮತ್ತು ಪಶ್ಚಿಮ ಬಿಹಾರದಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಹಲವು ರಾಜ್ಯಗಳಲ್ಲಿ ಹಲವಾರು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿಯಲ್ಲಿ ಗುರುವಾರ ಸುರಿದ ಮಳೆ ಕಳೆದ ಹಲವು ವರ್ಷಗಳ ದಾಖಲೆಯನ್ನು ಮುರಿದಿದೆ.
ಇಂದು ದೆಹಲಿ ಎನ್‌ಸಿಆರ್‌ನಾದ್ಯಂತ ಭಾರೀ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.