ವಾಲ್ಮೀಕಿ: ಹಗರಣ ಬಿಜೆಪಿ ಬೃಹತ್ ಪ್ರತಿಭಟನೆ
(ಸಂಜೆವಾಣಿ ವಾರ್ತೆ)
ದಾವಣಗೆರೆ. ಜೂ.೨೮; ವಾಲ್ಮೀಕಿ ನಿಗಮದಲ್ಲಿ ಸರಕಾರಿ ಹಣದ ವರ್ಗಾವಣೆಯ ಗೋಲ್‌ಮಾಲ್ ವಿರೋಧಿಸಿ ಹಾಗೂ ಅನ್ಯಾಯಕ್ಕೊಳಗಾದ ಎಸ್. ಟಿ. ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶಾಸಕ ಬಿ.ಪಿ ಹರೀಶ್ ಹಾಗೂ ಲೋಕಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಘಟನೆಯೂ ಜರುಗಿತು.ಅಷ್ಟೇ ಅಲ್ಲದೇ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿಹಾಕಿದ್ದಲ್ಲದೇ ಜಿಲ್ಲಾಧಿಕಾರಿ ಕಚೇರಿಯ ಗೇಟ್ ಹತ್ತುವ ಮೂಲಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ಥಳದಲ್ಲಿದ್ದ ಪೋಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ಹಣ ವರ್ಗಾವಣೆಯ ಅವ್ಯವಹಾರ ನಡೆದಿದೆ. ಈ ಹಣ ಕಾಂಗ್ರೆಸ್ ನ ಚುನಾವಣಾ ವೆಚ್ಚಕ್ಕೆ ಬಳಕೆಯಾಗಿರುವ ಶಂಕೆ ಇದೆ ಎಂದರು. ನಿಗಮದ ಎಂ.ಡಿ.ಪದ್ಮನಾಭ್ ವ್ಯವಹಾರದಲ್ಲಿ ನಡೆದಿರುವುದರಲ್ಲಿ ತನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎನ್ನುತ್ತಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕೆ ಹೊಣೆಯಾಗಬೇಕು. ಸಚಿವ ನಾಗೇಂದ್ರ ರಾಜೀನಾಮೆಯೊಂದೇ ಇದಕ್ಕೆ ಪರಿಹಾರವಲ್ಲ ಇದರ ಹಿಂದಿರುವ ಕಾಣದ ಕೈಗಳು ಹೊರಬರಬೇಕು. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಬಿಡುಗಡೆಯಾದ ಹಣದ ಅವ್ಯವಹಾರ ನಡೆಸಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹಿಂದುಳಿದ ವರ್ಗಗಳ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿರಿಸಿದ್ದ ಸುಮಾರು ೨೪ ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದು. ಆ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.
ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಯ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಸಚಿವರ ಮೌಖಿಕ ಆದೇಶ ಎಂದು ಬರೆದಿದ್ದರೂ, ಇದೂವರೆಗೂ ಈ ಪ್ರಕರಣದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ಇದುವರೆಗೂ ಸಚಿವರನ್ನು ತನಿಖೆಗೊಳಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ದುರಂತವೆಂದರೆ ಎಸ್ಟಿ ಮೀಸಲು ಕ್ಷೇತ್ರಗಳಿಂದ ಗೆದ್ದ ಕರ್ನಾಟಕದ ಶಾಸಕರುಗಳು ಈ ಸಮುದಾಯಕ್ಕೆ ಇಷ್ಟು ಅನ್ಯಾಯವಾದರೂ ಸಹ ಮೌನವಾಗಿರುವುದು ಈ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ.
ವರ್ಗಾವಣೆಯಾದ ಹಣವೆಲ್ಲವು ಹಣಕಾಸು ಇಲಾಖೆಯಡಿಯಲ್ಲಿಯೇ ನಡೆದಿದೆ. ಆದರೂ ಹಣಕಾಸು ಇಲಾಖೆಯು ಹೊಣೆ ಹೊತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆದ ಹಗರಣದ ಹೊಣೆಯನ್ನು ಹೊರಬೇಕು ಎಂದರು. ರಾಜ್ಯದ ಹಣಕಾಸು ನಿರ್ವಹಣೆ ಮುಖ್ಯಮಂತ್ರಿಗಳೇ ನಿರ್ವಹಿಸುವುದರಿಂದ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಸಂಬಂಧಿಸಿದಂತೆ ನಡೆದ ಅವ್ಯವಹಾರದಲ್ಲಿ ಮುಖ್ಯಮಂತ್ರಿಗಳು ಕೂಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.