ಕಳ್ಳಭಟ್ಟಿ ದುರಂತ; ಅಣ್ಣಾ ಡಿಎಂಕೆಯಿಂದ ಉಪವಾಸ ಸತ್ಯಾಗ್ರಹ
ಚೆನ್ನೈ, ಜೂ ೨೭: ತಮಿಳುನಾಡಿನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತ ರಾಜ್ಯ ರಾಜಕಾರಣದಲ್ಲಿ ವಿವಾದಿತ ಬಿರುಗಾಳಿ ಎಬ್ಬಿಸಿದೆ. ಕಲ್ಲಕುರಿಚಿಯಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ೬೦ ಮಂದಿ ಮೃತಪಟ್ಟಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಅಣ್ಣಾ ಡಿಎಂಕೆ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಅಣ್ಣಾ ಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಶಾಸಕರು, ಪಕ್ಷದ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಕಳ್ಳಭಟ್ಟಿ ದುರಂತದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಪ್ರಶ್ನೊತ್ತರ ಕಲಾಪವನ್ನು ರದ್ದುಪಡಿಸಿ ಕಳ್ಳಭಟ್ಟಿ ದುರಂತದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಗದ್ದಲ ಎಬ್ಬಿಸಿದ್ದರು. ಇದರಿಂದಾಗಿ ಪಳನಿಸ್ವಾಮಿ ಸೇರಿದಂತೆ ಇತರ ಅಣ್ಣಾ ಡಿಎಂಕೆ ಶಾಸಕರನ್ನು ಮುಂದಿನ ಕಲಾಪದವರೆಗೆ ಸಭಾಧ್ಯಕ್ಷರು ಅಮಾನತು ಮಾಡಿದ್ದರು. ಈಗ ಇದೇ ವಿಷಯವನ್ನು ಮುಂದಿಟ್ಟಿಕೊಂಡು ಹೋರಾಟದ ಅಖಾಡಕ್ಕೆ ಇಳಿದಿರುವ ಅಣ್ಣಾ ಡಿಎಂಕೆ ಸರ್ಕಾರದ ಮೊಂಡುತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಚೆನ್ನೈನ ರಾಜಾರಾಚಿನಂ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದೆ.