ಉಪಗ್ರಹ ಆಧಾರಿತ ಟೋಲ್ ಸಂಗ್ರಹ:10 ಸಾವಿರ ಕೋಟಿ ಆದಾಯ: ಗಡ್ಕರಿ
ನವದೆಹಲಿ: ದೇಶದಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹದಿಂದ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರಕ್ಕೆ 10 ಸಾವಿರ ಕೋಟಿ ರೂಪಾಯಿ ಬರಲಿದೆ. ಇದರ ಜೊತೆಗೆ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಈ ವರ್ಷಾಂತ್ಯದ ವೇಳೆಗೆ ನೂತನ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದ್ದಾರೆ.
ಟೋಲ್ ಪ್ಲಾಜಾಗಳ ಬದಲಿಗೆ ಉಪಗ್ರಹ ಆಧಾರಿತ ಟೋಲ್ ಜಾರಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಕಿ.ಮೀನಷ್ಟು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಉಪಗ್ರಹ ಆಧಾರಿತ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದರು.
ಜಿಎನ್‌ಎಸ್‌ಎಸ್‌ ತಂತ್ರಜ್ಞಾನದ ಅಳವಡಿಕೆಯಿಂದ 10 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯದ ಜತೆಗೆ ವ್ಯವಸ್ಥೆಯಲ್ಲಿರುವ ಶೇ.99ರಷ್ಟು ಲೋಪದೋಷಗಳನ್ನು ಕೂಡ ತೆಗೆಯಬಹುದಾಗಿದೆ. ಯಾವುದೇ ಲೋಪಗಳು ಇಲ್ಲದ, ಪಾರದರ್ಶಕ ವ್ಯವಸ್ಥೆಯಿಂದ ಕೂಡಿದ ಜಿಎನ್‌ಎಸ್‌ಎಸ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯದ ಜತೆಗೆ ಜನರಿಗೆ ಉತ್ತಮ ಸೇವೆ ಒದಗಿಸಲಾಗುವುದು ಹೇಳಿದರು.
ಜಿಪಿಎಸ್ ವ್ಯವಸ್ಥೆ ಹೇಗೆ
ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ, ವಾಹನಗಳಿಗೆ ಜಿಪಿಎಸ್‌ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಜಿಪಿಎಸ್‌ ಯಂತ್ರವು ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದಾಗಿ ನಮ್ಮ ವಾಹನವು ಯಾವ ಟೋಲ್‌ ರಸ್ತೆಗೆ ಪ್ರವೇಶ ಪಡೆದಿದೆ, ಯಾವ ರಸ್ತೆಯಿಂದ ನಿರ್ಗಮಿಸಿದೆ ಎಂಬುದನ್ನು ಲೆಕ್ಕ ಹಾಕಿ, ಬ್ಯಾಂಕ್‌ ಖಾತೆಯಿಂದ ಟೋಲ್‌ ಕಡಿತಗೊಳಿಸುತ್ತದೆ.
ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ, ಭಾರತದಲ್ಲಿ ಸಮಯದ ಜತೆಗೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ. ಟೋಲ್‌ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್‌ ಶುಲ್ಕ ಪಾವತಿಸುತ್ತೇವೆ. ಟೋಲ್‌ ಗೇಟ್‌ ನಂತರ ಅರ್ಧ ಕಿಲೋಮೀಟರ್‌ ಇದ್ದರೂ, ಪೂರ್ತಿ ಹಣವನ್ನು ನಾವೀಗ ಪಾವತಿಸಬೇಕು. ಆದರೆ, ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿಸುತ್ತೇವೆ.