ಲೋಕಸಭೆಯಲ್ಲಿ ರಾಹುಲ್ ವಿಪಕ್ಷ ನಾಯಕ
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಸದ ರಾಹುಲ್‌ಗಾಂಧಿಯವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಸಂಸದರಾದ ಕೆ.ಸಿ. ವೇಣುಗೋಪಾಲ್, ಶ್ರೇಯಸ್ ಪಟೇಲ್, ಸುರೇಶ್ ಮತ್ತಿತರರು ಇದ್ದಾರೆ.
ನವದೆಹಲಿ,ಜೂ.೨೬-ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ದ ಹೋರಾಟಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಸಜ್ಜಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ನಿಯೋಜಿಸಲು ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಕಾಂಗ್ರೆಸ್ ಪಕ್ಷ ಸ್ಪೀಕರ್‌ಗೆ ಪತ್ರ ನೀಡಿದೆ. ಸ್ಪೀಕರ್ ಹುದ್ದೆ ಆಯ್ಕೆಗೂ ಮುನ್ನ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್‌ನ ಅತ್ಯಂತ ಜನಪ್ರಿಯ ನಾಯಕ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ಕ್ರಮ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ೨೦೧೪ ರ ನಂತರ ಯಾವುದೇ ವಿರೋಧ ಪಕ್ಷ ನಿಗದಿತ ಅಂಕಿಅಂಶವನ್ನು ದಾಟಲು ವಿಫಲವಾದರಿಂದ ಎರಡು ಅವಧೀಯಲ್ಲಿ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ಇರಲಿಲ್ಲ.
ಲೋಕಸಭೆಯಲ್ಲಿ ಯಾವುದೇ ಪಕ್ಷದ ಲೋಕಸಭೆಯ ಕನಿಷ್ಠ ಶೇಕಡಾ ೧೦ ರಷ್ಟು ಸ್ಥಾನ ಹೊಂದಿದ್ದರೆ ಮಾತ್ರ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿದೆ. ಎರಡೂ ಅವಧಿಯಲ್ಲಿ ಕಾಂಗ್ರೆಸ್ ಈ ಸಂಖ್ಯೆ ಮುಟ್ಟಿರಲಿಲ್ಲ. ಈ ಬಾರಿ ಕಾಂಗ್ರೆಸ್ ೯೯ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡಲಾಗಿದೆ.
ನೀಟ್-ಯುಜಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಆಪಾದಿತ ಪೇಪರ್ ಸೋರಿಕೆ ಬಗ್ಗೆ ಆರಂಭದಲ್ಲಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆ ನಡೆದ ಅಗ್ನಿವೀರ್ ಮತ್ತು ಪ್ರಮುಖ ಚುನಾವಣಾ ವಿಷಯ ಕುರಿತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ.
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ನಿಯೋಜನೆ ಆಗುವ ಮೂಲಕ ಪ್ರಮುಖ ವಿಷಯಗಳ ನೇಮಕದಲ್ಲಿ ಇನ್ನು ಮುಂದೆ ವಿರೋಧ ಪಕ್ಷದ ನಾಯಕನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಪ್ರಧಾನ ಮಂತ್ರಿಯವರೊಂದಿಗೆ ಚುನಾವಣಾ ಆಯುಕ್ತರು ಮತ್ತು ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವ ಪ್ರಮುಖ ಪ್ಯಾನೆಲ್‌ಗಳ ಭಾಗವಾಗಿ ವಿರೋಧ ಪಕ್ಷದ ನಾಯಕರು ಇರಲಿದ್ದಾರೆ
ತಡ ರಾತ್ರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯಾ ಸದನ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ
“ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಪತ್ರ ಬರೆದು, ರಾಹುಲ್ ಗಾಂಧಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸುವ ನಿರ್ಧಾರ ತಿಳಿಸಿದ್ದರು