ಧನುಷ್ ಅಂಗರಕ್ಷಕರಿಂದ ಅಭಿಮಾನಿಗಳ ಜತೆ ಅನುಚಿತ ವರ್ತನೆ
ಮುಂಬೈ,ಜೂ.೨೬-ಕಾಲಿವುಡ್ ಸ್ಟಾರ್ ಹೀರೋ ಧನುಷ್ ಸದ್ಯ ಶೇಖರ್ ಕಮ್ಮುಲ ನಿರ್ದೇಶನದ ಕುಬೇರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಂಗ್ ಅಕ್ಕಿನೇನಿ ನಾಗಾರ್ಜುನ ಪವರ್ ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಇತ್ತೀಚಿನ ಶೆಡ್ಯೂಲ್ ಇತ್ತೀಚೆಗೆ ಮುಂಬೈನಲ್ಲಿ ಆರಂಭವಾಗಿದೆ. ಜುಹು ಬೀಚ್‌ನಲ್ಲಿ ನಾಗ್ ಮತ್ತು ಧನುಷ್ ಮೇಲೆ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಆದರೆ ಧನುಷ್ ಅವರ ಅಂಗರಕ್ಷಕರು ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆಯ ನಂತರ ನಟ ಧನುಷ್ ಮಂಗಳವಾರ ತಡರಾತ್ರಿ ಮುಂಬೈನಿಂದ ಹೊರಟಿರುವುದು ಕಂಡುಬಂದಿದೆ. ನಟ ತನ್ನ ಇಬ್ಬರು ಪುತ್ರರೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಫೋಟೋ ತೆಗೆಯಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ನಾಯಕ ಧನುಷ್ ಅವರು ಕುಬೇರ ಚಿತ್ರದ ಶೂಟಿಂಗ್‌ಗಾಗಿ ತಮ್ಮ ವೈಯಕ್ತಿಕ ಭದ್ರತಾ ತಂಡದೊಂದಿಗೆ ಜುಹು ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆದರೆ ಈ ವೇಳೆ ಅಭಿಮಾನಿಗಳು ಧನುಷ್‌ನತ್ತ ಧಾವಿಸಿ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಯತ್ನಿಸಿದ್ದಾರೆ. ನಾಯಕನ ಅಂಗರಕ್ಷಕರು ತಕ್ಷಣ ಎಚ್ಚೆತ್ತ ಅಭಿಮಾನಿಗಳನ್ನು ದೂರ ತಳ್ಳಿದ್ದಾರೆ. ಇದರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಎರಡು ದಿನಗಳ ಹಿಂದೆ ನಾಗಾರ್ಜುನ ಬಾಡಿಗಾರ್ಡ್ ವೃದ್ಧನ ಜೊತೆ ನಿರ್ದಯವಾಗಿ ವರ್ತಿಸಿದ ವಿಡಿಯೋ ನಂತರ ಇದೀಗ ಧನುಷ್ ಭದ್ರತಾ ಸಿಬ್ಬಂದಿ ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಸಿನಿಮಾ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳು ಅವರ ಮೇಲೆ ಮುಗಿ ಬೀಳುವುದು ಸಹಜ. ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರಿಸಲು ಮತ್ತು ಸಾಧ್ಯವಾದರೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವದರಿಂದ ಇಂತಹ ಘಟನೆಗಳು ಸಂಭವಿಸುತ್ತವೆ. ಕೆಲ ಹೀರೋ ಹೀರೋಯಿನ್ ಗಳು ಅಭಿಮಾನಿಗಳ ಉತ್ಸಾಹ ನೋಡಿ ತುಂಬಾ ತಾಳ್ಮೆಯಿಂದ ಅವರನ್ನು ಕರೆದು ನಗುನಗುತ್ತಲೇ ಸೆಲ್ಫಿಗೆ ಫೋಸ್ ನೀಡುತ್ತಾರೆ.
ಸೋಮವಾರವೇ ನಾಗಾರ್ಜುನ ಅವರ ಅಂಗರಕ್ಷಕರೊಬ್ಬರು ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಅಭಿಮಾನಿಯನ್ನು ಹಿಂದಕ್ಕೆ ತಳ್ಳಿದ್ದಾರೆ .ಈ ಬಗ್ಗೆ ಸಾಕಷ್ಟು ವಿವಾದಗಳು ನಡೆದಿದ್ದು, ನಾಗಾರ್ಜುನ್ ಕ್ಷಮೆ ಯಾಚಿಸಿದ್ದಾರೆ. ಇದೀಗ ಹೊಸ ವಿಡಿಯೋದಲ್ಲಿ ಸೌತ್ ಸ್ಟಾರ್ ಧನುಷ್ ಅವರ ಅಂಗರಕ್ಷಕ ಕೂಡ ಇದೇ ರೀತಿ ಮಾಡುತ್ತಿರುವುದು ಕಂಡುಬಂದಿದೆ. ಜನರು ಮತ್ತೆ ಆಕ್ರೋಶಗೊಂಡಿದ್ದಾರೆ.