ಅಕ್ರಮ ಪಬ್ ನೆಲಸಮಕ್ಕೆ ಶಿಂಧೆ ಸೂಚನೆ
ಮುಂಬೈ,ಜೂ.೨೬- ರಾಜ್ಯದಲ್ಲಿ “ಎಲ್ಲಾ ಅಕ್ರಮ ಪಬ್‌ಗಳ ಮೇಲೆ ಬುಲ್ಡೋಜ್ ಓಡಿಸಿ ನೆಲಸಮ ಮಾಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪುಣೆಯಲ್ಲಿ ತಡರಾತ್ರಿ ಪಾರ್ಟಿಯ ವೇಳೆ ಬಾರ್‌ನ ವಾಶ್‌ರೂಮ್‌ನಲ್ಲಿ ಅಪ್ರಾಪ್ತ ವಯಸ್ಕರು ಡ್ರಗ್ಸ್ ಸೇವಿಸುತ್ತಿರುವ ಬಾರ್‌ನ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಮಹಾರಾಷ್ಟ್ರದಲ್ಲಿ ಅಕ್ರಮ ಪಬ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಕಟ್ಟಡ ನಿಯಮಗಳನ್ನು ಉಲ್ಲಂಘಿಸುವ ಎಲ್ಲಾ ಕಟ್ಟಡಗಳನ್ನು ಬುಲ್ಡೋಜರ್ ಓಡಿಸಿ ದ್ವಂಸ ಮಾಡಿ.” ಪುಣೆಯನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ಮಾಡಲು ಡ್ರಗ್ ದಂಧೆಕೋರರ ವಿರುದ್ಧ ಹೊಸ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ
ನಾಲ್ವರು ಪೊಲೀಸರು ಅಮಾನತು
ಪುಣೆ ಪೊಲೀಸರು ಅಪ್ರಾಪ್ತರಿಗೆ ಡ್ರಗ್ಸ್ ನೀಡುತ್ತಿದ್ದಾರೆಂದು ಆರೋಪಿಸಿ ನಗರದ ಬಾರ್ ಮೇಲೆ ದಾಳಿ ನಡೆಸಿ ಸೀಲ್ ಮಾಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಶಿವಾಜಿ ನಗರ ಪೊಲೀಸ್ ಠಾಣೆಯ ಒಬ್ಬ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಪೊಲೀಸರು ಅಮಾನತುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ೮ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಡರಾತ್ರಿ ಪಾರ್ಟಿಯ ವೇಳೆ ಬಾರ್‌ನ ವಾಶ್‌ರೂಮ್‌ನಲ್ಲಿ ಅಪ್ರಾಪ್ತ ಹುಡುಗರು ಡ್ರಗ್ಸ್ ಸೇವಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಪಾಶ್ ಏರಿಯಾದಲ್ಲಿರುವ ಪಬ್‌ನಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಈ ಬಗ್ಗೆ ತಕ್ಷಣದ ತನಿಖೆಗೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಆದೇಶಿಸಿದ್ದು, ತಡರಾತ್ರಿ ದಾಳಿ ನಡೆದಿದೆ.ಪೊಲೀಸ್ ತಂಡಗಳು ಆವರಣದಲ್ಲಿ ಸಂಪೂರ್ಣ ಶೋಧ ನಡೆಸಿ ಮುಂಜಾನೆ ಬಾರ್ ಅನ್ನು ಸೀಲ್ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್‌ನ ಮಾಲೀಕ ಮತ್ತು ಇತರ ಐವರನ್ನು ಬಂಧಿಸಿ ಪುಣೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನಂತರ ನ್ಯಾಯಾಲಯ ಜೂನ್ ೨೯ ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.