ವಿವಾಹವಾಗಿ ಪುರುಷರ ವಂಚನೆ ಮಹಿಳೆ ಬಂಧನ
ಡೆಹ್ರಾಡೂನ್,ಜೂ.೨೬-ಹಲವು ಗಂಡಸರನ್ನು ಮದುವೆಯಾಗಿ ನಗದು ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಓಡಿ ಹೋಗಿದ್ದ ಮಹಿಳೆ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಮಹಿಳೆ ವೈದ್ಯಕೀಯ ತಪಾಸಣೆ ವೇಳೆ ಆಕೆ ಎಚ್‌ಐವಿ ಪಾಸಿಟಿವ್ ಎಂದು ಕಂಡು ಬಂದಿದೆ ಇದು ಪೊಲೀಸರನ್ನು ಬೆಚ್ಚಿಬೀಳಿಸಿದೆ.
ಮೇ ೬ ರಂದು ಉತ್ತರ ಪ್ರದೇಶ ಪೊಲೀಸರು ಮದುವೆಯ ಹೆಸರಿನಲ್ಲಿ ಅನೇಕ ಪುರುಷರನ್ನು ವಂಚಿಸಿದ ಮಹಿಳೆಯರನ್ನು ಬಂಧಿಸಿದ್ದಾರೆ. ಯುಪಿ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಆಕೆಯ ಗ್ಯಾಂಗ್‌ನ ೬ ಸದಸ್ಯರನ್ನು ಸಹ ಬಂಧಿಸಿ ಪೂಜಾಫರ್‌ನಗರ ಜೈಲಿಗೆ ಕಳುಹಿಸಲಾಗಿದೆ.
ಇಲ್ಲಿಯವರೆಗೆ ಆರೋಪಿ ಮಹಿಳೆ ತಾನು ಐದು ಬಾರಿ ಮದುವೆಯಾಗಿರುವುದಾಗಿ ಹೇಳಿದ್ದಾಳೆ. ಐವರಲ್ಲಿ ಮೂವರು ಉತ್ತರಾಖಂಡ ರಾಜ್ಯದವರು. ಆದರೆ ಆಕೆ ಇನ್ನೂ ಹಲವರನ್ನು ಮದುವೆಯಾಗಿ ಮೋಸ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಎಚ್‌ಐವಿ ಇರುವುದು ಪತ್ತೆಯಾಗಿದೆ. ಬಂಧಿತ ಮಹಿಳೆಗೆ ಈಗ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ನೀಡಲಾಗುತ್ತಿದೆ ಎಂದು ಜೈಲು ಅಧೀಕ್ಷಕ ಸೀತಾರಾಮ್ ಶರ್ಮಾ ತಿಳಿಸಿದ್ದಾರೆ.
ಮಹಿಳೆಗೆ ಎಚ್ ಐವಿ ಸೋಂಕು ತಗುಲಿರುವುದು ಎರಡೂ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದೀಗ ಆಕೆಯನ್ನು ಮದುವೆಯಾಗಿರುವ ಪುರುಷರಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ಉತ್ತರಾಖಂಡದ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಆಕೆ ದೈಹಿಕ ಸಂಪರ್ಕಕ್ಕೆ ಬಂದಿದ್ದ ಮೂವರು ಪುರುಷರಿಗೆ ಈಗ ಎಚ್‌ಐವಿ ಪಾಸಿಟಿವ್ ಎಂದು ದೃಢಪಡಿಸಿದೆ. ಉಧಮ್ ಸಿಂಗ್ ನಗರದ ಆರೋಗ್ಯ ಇಲಾಖೆಯು ಎನ್‌ಜಿಒ ಸಹಯೋಗದೊಂದಿಗೆ ಈ ಪುರುಷರಿಗೆ ಪರೀಕ್ಷೆಗಳನ್ನು ನಡೆಸಿದೆ ಮತ್ತು ಅವರಿಗೆ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಪುರುಷರ ಕುಟುಂಬದ ಇತರ ಸದಸ್ಯರನ್ನು ಸಹ ಪರೀಕ್ಷಿಸಲಾಗುತ್ತಿದೆ.
ಉತ್ತರಾಖಂಡದ ರುದ್ರಪುರ ಜಿಲ್ಲೆಯ ನಿವಾಸಿಯಾದ ಈ ಮಹಿಳೆಯನ್ನು ಮೇ ೬ ರಂದು ಟಿಟಾವಿ ಪೊಲೀಸರು ಆಕೆಯ ತಾಯಿ ಮತ್ತು ಇತರ ಐದು ಜನರೊಂದಿಗೆ ಬಂಧಿಸಿದ್ದಾರೆ. ಈ ಇಡೀ ಗ್ಯಾಂಗ್ ಮಧ್ಯವರ್ತಿಗಳ ಮೂಲಕ ಮದುವೆಗಳನ್ನು ಮಾಡುತ್ತಿತ್ತು ಎನ್ನಲಾಗಿದೆ. ಇದಾದ ಬಳಿಕ ರಾತ್ರಿ ವೇಳೆ ಕುಟುಂಬಸ್ಥರಿಗೆ ಮತ್ತು ಬರುವ ಆಹಾರ ತಿನ್ನಿಸಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ಸಮೇತ ಇಡೀ ತಂಡ ಪರಾರಿಯಾಗುತ್ತಿತ್ತು ಎನ್ನಲಾಗಿದೆ .