ಹಳೆ ಪ್ಯಾಕೇಟ್‌ಗೆ ಹೊಸ ದರ -ಆಕ್ರೋಶ
ರಾಯಚೂರು, ಜೂ.೨೬- ಇಂದಿನಿಂದಲೇ ಕೆಎಂಎಫ್ ನಂದಿನಿ ಹಾಲಿನ ಹೊಸ ದರ ಅನ್ವಯವಾಗಲಿದೆ. ಕೆಎಂಎಫ್ ನಂದಿನಿ ಹಾಲಿನ ದರವನ್ನು ಹೆಚ್ಚಿಸಿದೆ, ಆದರೆ ರಾಯಚೂರಿನಲ್ಲಿ ಹಳೆ ಬೆಲೆಯ ಪ್ಯಾಕೆಟ್ ಗಳು ಹೊಸ ಬೆಲೆಗೆ ಮಾರಾಟವಾಗುತ್ತಿದೆ, ಇದರಿಂದಾಗಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚುವರಿ ೫೦ ಮಿ.ಲೀ. ಹಾಲು ಇಲ್ಲದಿದ್ದರೂ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್‌ಗೆ ೨ ಹೆಚ್ಚುವರಿ ಪಡೆಯಲಾಗುತ್ತಿದೆ. ಜು.೨೬ರಿಂದ ಹೊಸ ಬೆಲೆ ಅನ್ವಯವಾಗಲಿದೆ ಎಂದು ಕೆಎಂಎಫ್ ಹೊರಡಿಸಿರುವ ಆದೇಶದಲ್ಲಿ ನಮೂದಿಸಿರುವುದರಿಂದ ಹೊಸ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ವರ್ತಕರು ಹೇಳುತ್ತಿದ್ದಾರೆ.
ಇದೇ ವೇಳೆ ಕೆಎಂಎಫ್ ಅಧಿಕಾರಿಗಳು ಸೋಮವಾರ ರಾತ್ರಿ ಬಂದ ಹಾಲನ್ನು ಹಳೆ ಬೆಲೆಗೆ ಮಾರಾಟ ಮಾಡಬೇಕು. ಇಂದು ಸಂಜೆ ಬರುವ ಹಾಲಿನ ಪ್ಯಾಕೆಟ್ ಹೊಸ ಬೆಲೆಗೆ ಮಾರಾಟ ಮಾಡುವಂತೆ ವರ್ತಕರಿಗೆ ಸೂಚಿಸಲಾಗಿದ್ದಾರೆ, ಇದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಗೊಂದಲ ಉಂಟಾಗುತ್ತಿದೆ. ಒಂದೆಡೆ ಬೆಲೆ ಏರಿಕೆಯ ಹೊರೆ ಒಂದೆಡೆಯಾದರೆ, ಮತ್ತೊಂದೆಡೆ ಹಳೆ ಪ್ಯಾಕೆಟ್ ಗಳಿಗೂ ಹೊಸ ದರ ಅನ್ವಯವಾಗುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.