ಬೇಡಿಕೆ ಈಡೇರಿಕೆಗೆ ಪಾಲಿಕೆ ನೌಕರರ ಮನವಿ
ಬೆಂಗಳೂರು, ಜೂ. ೨೬- ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ರವರನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಮತ್ತು ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಭೆ ಕರೆಯುವಂತೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ಮನವಿ ಪತ್ರಗಳನ್ನು ನೀಡಿ ಅದರಲ್ಲಿ ಪ್ರಮುಖವಾಗಿ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ತಿದ್ದುಪಡಿ ಮತ್ತು ೧೦ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೂ ಸಹ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್ ಸೌಲಭ್ಯವನ್ನು ಜಾರಿಗೆ ಮಾಡಲು ಹಾಗೂ ಎರವಲು ಸೇವೆ ಅಧಿಕಾರಿ ಮತ್ತು ನೌಕರರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿ ಮತ್ತು ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿಗಳನ್ನು ನೀಡಲು ಮನವಿ ಸಲ್ಲಿಸಿದರೂ ಈ ತಹಲ್ ವರೆವಿಗೂ ಯಾವುದೇ ಕ್ರಮವನ್ನು ಜರುಗಿಸದೆ ಇರುವುದರಿಂದ ತಾವು ತಮ್ಮ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಕುಂದು ಕೊರತೆಯನ್ನು ಬಗೆಹರಿಸಬೇಕು ಎಂದು ಮನವಿ ಸಲ್ಲಿಸಿದರು.
ನೌಕರರ ಮನವಿಗೆ ಸ್ಪಂದಿಸಿದ ಸಚಿವ ಬೈರತಿ ಸುರೇಶ್, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಮನವಿಯನ್ನು ಸ್ವೀಕರಿಸಿ, ಮುಂದಿನ ವಾರ ಇಲಾಖಾ ಮುಖ್ಯಸ್ಥರ ಮತ್ತು ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.