ನೂರಾರು ಕೋಟಿ ವಂಚನೆ ಖದೀಮನ ಬಂಧನ
ಚಿತ್ರದುರ್ಗ,ಜೂ.೨೬-ಅತಿ ಹೆಚ್ಚಿನ ಲಾಭದ ಆಸೆ ಹುಟ್ಟಿಸಿ ಸಾವಿರಾರು ಮಂದಿಗೆ ನೂರಾರು ಕೋಟಿ ರೂಗಳ ವಂಚನೆ ನಡೆಸಿ ವಿದೇಶಕ್ಕೆ ಪರಾರಿಯಾಗಿದ್ದ ಖತರ್ನಾಕ್ ಖದೀಮನನ್ನು ಚಿತ್ರದುರ್ಗ ಸೆನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶ ಮೂಲದ ಕೋಡೆ ರಮಣಯ್ಯ ಬಂಧಿತ ಆರೋಪಿಯಾಗಿದ್ದಾನೆ.ವಿದೇಶಕ್ಕೆ ಪರಾರಿಯಾಗಿದ್ದ ಆತನನ್ನು ಲುಕ್ ಔಟ್ ನೋಟೀಸ್ ಜಾರಿ ಮೂಲಕ ಕೊಲ್ಕತ್ತಾ ಪೊಲೀಸರ ಸಹಕಾರದಿಂದ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿ ಕೋಡೆ ರಮಣಯ್ಯ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈ.ಲಿ. ಹೆಸರಿನ ಕಂಪನಿ ತೆರದಿದ್ದನು. ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದರೆ, ೬೦ ದಿನಗಳಲ್ಲೇ ಹಣ ದ್ವಿಗುಣ ಆಗುತ್ತೆ ಎಂದು ಆಮಿಷ ಒಡ್ಡಿ, ಹಣ ಪಡೆದು ವಂಚನೆ ಎಸಗುತ್ತಿದ್ದನು.
ಆರೋಪಿ ಕೋಡೆ ರಮಣಯ್ಯ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ರೈಲ್ವೆ ಇಲಾಖೆ ನೌಕರ ರಮೇಶ್ ಅವರನ್ನು ಸಂಪರ್ಕಿಸಿ “ನಿಮ್ಮ ಹಣ ದ್ವೀಗುಣವಾಗಲಿದೆ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿ” ಎಂದು ಆಮಿಷವೊಡ್ಡಿದ್ದು ಆತನ ಮಾತು ನಂಬಿ, ರಮೇಶ್ ೧ ಲಕ್ಷ ೪ ಸಾವಿರ ರೂ. ಹೂಡಿದ್ದರು ಹಣ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಯು ರಮೇಶ್ ಅವರ ಸಂಪರ್ಕಕ್ಕೆ ಸಿಗದಿದ್ದರಿಂದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಆರೋಪಿ ಕೋಡೆ ರಮಣಯ್ಯ ಈ ರೀತಿ ಚಿತ್ರದುರ್ಗದಲ್ಲಿ ೧೦೬ ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದು ೮೦ ಕ್ಕೂ ದೂರು ದಾಖಲಾಗಿವೆ. ಚಿತ್ರದುರ್ಗ ಜಿಲ್ಲೆ ಒಂದರಲ್ಲೇ ಆರೋಪಿಐ ಸುಮಾರು ೪.೭೯ ಕೋಟಿ ರೂ. ಹಣ ಪಡೆದು ವಂಚಿಸಿದ್ದಾನೆ,ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಕೋಡೆ ರಮಣಯ್ಯ ವಿದೇಶಕ್ಕೆ ಪರಾರಿಯಾಗಿ ವಿಯಟ್ನಾಂನಲ್ಲಿ ತಲೆಮರೆಸಿಕೊಂಡಿದ್ದನು.
ಬಳಿಕ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದು, ಆರೋಪಿ ಕೋಡೆ ರಮಣಯ್ಯ ಆರು ತಿಂಗಳ ಬಳಿಕ ಪ್ರಶ್ಚಿಮ ಬಂಗಾಳದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಅಲ್ಲಿಯ ಸ್ಥಳೀಯ ಪೊಲೀಸರು ಆತನನ್ನು ಬಂಧಿಸಿ ಚಿತ್ರದುರ್ಗ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ತಕ್ಷಣವೇ ಅಲ್ಲಿಗೆ ಧಾವಿಸಿದ ಚಿತ್ರದುರ್ಗ ಪೊಲೀಸರು ಆರೋಪಿ ಕೋಡೆ ರಮಣಯ್ಯ ಕೊಲ್ಕತ್ತಾದಿಂದ ಕರೆತಂದಿದ್ದಾರೆ. ಆರೋಪಿ ಕೋಡೆ ರಮಣಯ್ಯ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಜನರಿಗೆ ವಂಚಿಸಿದ್ದಾನೆ.ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವಂತೆ ಡಿಜಿ, ಐಜಿಗೆ ಧರ್ಮೇಂದರ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.
ಲುಕ್‌ಔಟ್ ನೋಟೀಸ್ :
ಯಾವುದೇ ಒಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ತನಿಖಾ ಸಂಸ್ಥೆಗಳು ಅನುಸರಿಸುವ ಕ್ರಮವಾಗಿದೆ. ಇದನ್ನು ದೇಶದ ವಲಸೆ ಬ್ಯೂರೋ ಹಾಗೂ ಗೃಹ ಸಚಿವಾಲಯ (ಎಂಹೆಚ್ ಎ) ಮಾತ್ರ ನೀಡಬಹುದು. ಅಂತಾರಾಷ್ಟ್ರೀಯ ಗಡಿ, ಬಂದರು, ವಿಮಾನ ನಿಲ್ದಾಣ ಮತ್ತಿತರ ಸಂಚಾರ ಪಾಯಿಂಟ್‌ಗಳಲ್ಲಿ ಸಂಬಂಧಪಟ್ಟ ಆರೋಪಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗುತ್ತದೆ. ಹೀಗಾಗಿ ಆರೋಪಿ ಇರುವ ದೇಶದಿಂದ ಬೇರೆ ಕಡೆಗೆ ಲೀಗಲ್ ಆಗಿ ಹೋಗಲು ಸಾಧ್ಯವಿಲ್ಲ. ಯಾವುದೇ ವಿಮಾನ ನಿಲ್ದಾಣ, ಬಂದರು, ಅಂತಾರಾಷ್ಟ್ರೀಯ ಗಡಿಗೆ ಹೋದರು ಅಲ್ಲಿರುವ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆಯಬಹುದು.