ಎಷ್ಟು ಬೇಕಾದರೂ ಡಿಸಿಎಂ ಹುದ್ದೆ ಸೃಷ್ಟಿಸಿ; ಮೊದಲು ಡಿ.ಕೆ.ಶಿವಕುಮಾರ್ ಗೆ ಮುಖ್ಯಮಂತ್ರಿ ಮಾಡಿ

ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.25; ನಮ್ಮ ಡಿ.ಕೆ.ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಿ, 3 ಅಲ್ಲ, 8 ಅಲ್ಲ, 10 ಅಲ್ಲ 15 ಉಪ ಮುಖ್ಯಮಂತ್ರಿ ಹುದ್ದೆಗಳನ್ನಾದರೂ ಮಾಡಲಿ. ಜಾತಿಗೊಂದು ಉಪ ಮುಖ್ಯಮಂತ್ರಿ ಮಾಡಿದರೂ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪರ ಮತ್ತೊಮ್ಮೆ ಬಲವಾಗಿ ಬ್ಯಾಟ್ ಬೀಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯರು ಬೇಡಿಕೆ ಇಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಈ ವಿಚಾರ ಮಾತನಾಡದಂತೆ ಹೇಳಿದರೂ ಹಿರಿಯರು ಪಾಲಿಸುತ್ತಿಲ್ಲ. ಹಾಗಾಗಿ ನಾವೂ ಹಿರಿಯರನ್ನು ಅನುಸರಿಸಬೇಕಾಗುತ್ತದೆ. ಎಷ್ಟು ಬೇಕಾದರೂ ಡಿಸಿಎಂ ಹುದ್ದೆ ಸೃಷ್ಟಿಸಲಿ. ಅದಕ್ಕೆ ಮೊದಲು ಡಿ.ಕೆ.ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಲಿ ಎಂದರು.
ಈಗಾಗಲೇ ಲೋಕಸಭೆ, ವಿಧಾನಸಭೆ ಚುನಾವಣೆಗಳೆಲ್ಲಾ ಮುಗಿದಿವೆ. ಈಗ ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಪ್ರಸ್ತಾಪವೂ ಸರಿಯಲ್ಲ. ಆಕಸ್ಮಾತ್ ಕೆಲ ಹಿರಿಯ ನಾಯಕರು ಉಪ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿದ್ದಾರೆ. ಮೂರಲ್ಲ, ಬೇಕಿದ್ದರೆ 5 ಉಪ ಮುಖ್ಯಮಂತ್ರಿಗಳನ್ನು ಮಾಡಲಿ. ನಮ್ಮ ಅಭ್ಯಂತರವಂತೂ ಇಲ್ಲ. ಆದರೆ, ಡಿ.ಕೆ.ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಿ, ಐದು ಡಿಸಿಎಂ ಹುದ್ದೆ ಸೃಷ್ಟಿಸಲಿ, ಸಂಪುಟ ಪುನಾರಚನೆ ಮಾಡಲಿ ಎಂದು ಅವರು ಒತ್ತಾಯಿಸಿದರು.
ಹಿರಿಯರ ಬೇಡಿಕೆಯಂತೆ ಈಗ ಅದೂ ಒಂದು ಆಗಿ ಬಿಡಲಿ. ಆ ಹಿರಿಯ ನಾಯಕರ ಆಸೆಯೂ ಈಡೇರಲಿ. ಡಿಸಿಎಂ ಹುದ್ದೆ ವಿಚಾರ ಪ್ರಸ್ತಾಪಿಸದಂತೆ ಹೇಳುತ್ತಿದ್ದರೂ ಅನೇಕ ಹಿರಿಯರು ಚರ್ಚೆ
ಹುಟ್ಟು ಹಾಕುತ್ತಿದ್ದಾರೆ. ಹಿರಿಯರು ಅಂತಹ ಸೂಚನೆಯನ್ನೇ ಪಾಲಿಸಲಿಲ್ಲವೆಂದರೆ, ನಾವೂ ಸಹ ಇಂತಹ ವಿಚಾರದ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಡಿ.ಕೆ.ಶಿವಕುಮಾರ ಸಾಹೇಬರಿಗೆ ಮುಖ್ಯಮಂತ್ರಿ ಮಾಡಿ, ಎಷ್ಟು ಬೇಕಾದರೂ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಿ ಎಂಬುದಾಗಿ ಮಾತನಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಉಪ ಮುಖ್ಯಮಂತ್ರಿ ಹುದ್ದೆ ಚರ್ಚೆ ಬೇಡವೆಂದರೂ ಕೆಲ ಹಿರಿಯ ನಾಯಕರು ಅದೇ ಹುದ್ದೆಯ ಚರ್ಚೆ ಮಾಡುತ್ತಿದ್ದಾರೆ. ನಾವೂ ಹಿರಿಯರನ್ನು ಅನುಸರಿಸಬೇಕಾಗುತ್ತದೆ. ಮೂರಲ್ಲ, ಐದು ಡಿಸಿಎಂ ಹುದ್ದೆಗಳನ್ನೇ ಮಾಡಲಿ. ಮೊದಲು ಡಿ.ಕೆ.ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಲಿ. ಡಿ.ಕೆ.ಸಾಹೇಬರ ಪಕ್ಷ ಸಂಘಟನೆಯನ್ನು ಗುರುತಿಸಿ, ಉಪ ಮುಖ್ಯಮಂತ್ರಿಯಾಗಿ ಪಕ್ಷಮಾಡಿದೆಯೇ ಹೊರತು, ಜಾತಿಯ ಆದಾರದಲ್ಲಿ ಮಾಡಿಲ್ಲ. ಜಾತಿ ಆದಾರದಲ್ಲೇ ಡಿಸಿಎಂ ಮಾಡುವುದಾದರೆ ಡಿ.ಕೆ. ಸಾಹೇಬರಿಗಷ್ಟೇ ಅಲ್ಲ, ಎಲ್ಲಾ ಸಮುದಾಯಗಳೂ ಕಾಂಗ್ರೆಸ್ಸಿಗೆ ಮತ ನೀಡಿವೆ. ಸಣ್ಣ ಜಾತಿಗಳು, ಮೈಕ್ರೂ ಕಮ್ಯುನಿಟಿಗಳೂ ಮತ ಹಾಕಿವೆ. ಅಂತಹ ಎಲ್ಲಾ ಜಾತಿಗೂ ಡಿಸಿಎಂ ಮಾಡಿ, ನ್ಯಾಯ ಕೊಡಲಿ ಎಂದು ಅವರು ಆಗ್ರಹಿಸಿದರು.
ಹೊಸದಾಗಿ ಮೂರಲ್ಲ, ಐದಲ್ಲ, ಎಂಟಲ್ಲ, 10 ಆಗಲಿ ಅಥವಾ 15 ಆಗಲಿ, ಎಲ್ಲಾ ಜಾತಿಗಳನ್ನೂ ಗುರುತಿಸಿ, ಉಪ ಮುಖ್ಯಮಂತ್ರಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಡಿಸಿಎಂಗಳನ್ನು ಮಾಡುವ ಮುನ್ನ, ಡಿ.ಕೆ.ಶಿವಕುಮಾರ ಸಾಹೇಬರನ್ನು ಮೊದಲು ಮುಖ್ಯಮಂತ್ರಿ ಮಾಡಬೇಕು. ಅದರ ಮೇಲೆ ಎಷ್ಟಾದರೂ ಡಿಸಿಎಂ ಮಾಡಲಿ. ಈ ಎಲ್ಲಾ ನಿರ್ಧಾರವನ್ನು ಪಕ್ಷದ ಹೈ
ಕಮಾಂಡ್‌ ಕೈಗೊಳ್ಳಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾವೂ ಸಹ ಬದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ತೊಂದರೆಯೇನೂ ಆಗಿಲ್ಲ. ನಮ್ಮ ಚನ್ನಗಿರಿ ಕ್ಷೇತ್ರದಲ್ಲಿ ನಾವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಅನುದಾನವೇನೂ ನಮಗೆ ಕಡಿಮೆಯಾಗಿಲ್ಲ. ಗ್ಯಾರಂಟಿ ಯೋಜನೆಗಳನ್ನು ತಂದಿದ್ದು ನಾಡಿನ ತಾಯಂದಿರ ನೆಮ್ಮದಿಗಾಗಿ. ಕುಟುಂಬದ ಮಹಿಳೆಗೆ ಬರಬೇಕಾದ ಹಣ ಒಂದು ತಿಂಗಳು ಹೆಚ್ಚು ಕಡಿಮೆ ಆಗಿರಬಹುದಷ್ಟೇ. ಆದರೆ, ಗೃಹಲಕ್ಷ್ಮಿ ಹಣ ಖಂಡಿತಾ ತಾಯಂದಿರಿಗೆ ಆಸರೆಯಾಗಿದೆಯೆಂಬುದನ್ನು ಅಭಿಮಾನದಿಂದ ಹೇಳುತ್ತೇನೆ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ರು. ಹಣ ಮೀಸಲಿಟ್ಟಿದೆ. ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳುತ್ತಾ, ಜನ ಮೆಚ್ಚುವಂತಹ ಆಡಳಿತ ನೀಡುತ್ತಿದ್ದೇವೆ, ಸರ್ಕಾರವನ್ನು ಇಷ್ಟು ಚೆನ್ನಾಗಿ ಮಾಡುತ್ತಿದ್ದೇವೆಂದರೆ ಅದಕ್ಕಿಂತಲೂ ಇನ್ನೇನು ಬೇಕು? ನಮ್ಮ ಸರ್ಕಾರದ ಜನಪರ ಯೋಜನೆ, ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ. ವಿಪಕ್ಷ ಬಿಜೆಪಿ ವಿನಾಕಾರಣ ಮಿಥ್ಯಾರೋಪ ಮಾಡುತ್ತಿದೆಯಷ್ಟೇ ಎಂದು ಅವರು ಕುಟುಕಿದರು. ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೆಂದು ಬಿಜೆಪಿಯವರು ಹೋರಾಟ ನಡೆಸುತ್ತಿದ್ದಾರೆ. ಹಿಂದೆ ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆ ಇದ್ದಾಗಲೂ ಬೆಲೆ ಏರಿಕೆ ಆಗಿತ್ತಲ್ಲವೇ? ಆಗ ಬಿಜೆಪಿ ಅಧಿಕಾರಾವದಿಯಲ್ಲಿ ಬೆಲೆ ಏರಿಕೆಯೆಂಬುದು ಎಲ್ಲಿಗೆ ಹೋಗಿತ್ತೆಂಬುದು ಎಲ್ಲರಿಗೂ ಗೊತ್ತಿದೆ. ಆಗಲೂ ಬಿಜೆಪಿಯಲು ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಿದ್ದರೆ ಹೌದು ಎನ್ನಬಹುದಿತ್ತು. ಆಗ ಪ್ರತಿಭಟಿಸಿದ್ದರೆ ನಾವು ಮಾತನಾಡಬಹುದಿತ್ತು. ಆಗ ಹೋರಾಟ, ಪ್ರತಿಭಟನೆ ಮಾಡದ ಬಿಜೆಪಿ ಈಗ ಮಾತನಾಡಿದರೆಅದಕ್ಕೆ ನಾವು ಉತ್ತರಿಸಬೇಕಾಗಿಲ್ಲ ಎಂದು ವಿಪಕ್ಷ ಬಿಜೆಪಿ ನಾಯಕರ ಟೀಕೆ, ಆರೋಪ, ಪ್ರತಿಭಟನೆಗಳಿಗೆ ಶಿವಗಂಗಾ ಬಸವರಾಜ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.