ನಟ ದರ್ಶನ್‌ ಜೈಲಿಗೆ
ಬೆಂಗಳೂರು,ಜೂ.22-ಚಿತ್ರದುರ್ಗದ ರೇಣುಕಾಸ್ವಾಮಿ ಕ್ರೂರ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು,ಇದರಿಂದ 13 ವರ್ಷಗಳ ಬಳಿಕ ನಟ ದರ್ಶನ್ ಮತ್ತೆ‌ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ
ಹನ್ನೆರಡು ದಿನಗಳ ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್, ಧನರಾಜ್‌ ಸೇರಿ ನಾಲ್ವರನ್ನು ನಗರದ 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಇಂದು ಮಧ್ಯಾಹ್ನ ಹಾಜರುಪಡಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದು ನಟ ದರ್ಶನ್ ಜೈಲು ಸೇರಿದ್ದಾರೆ.
ಕೊಲೆ ಕೇಸ್ ಸಂಬಂಧ ಜೂನ್ 11ರಂದು ದರ್ಶನ್‌ ಬಂಧನವಾಗಿತ್ತು. ಮೂರು ಬಾರಿ ದರ್ಶನ್‌ರನ್ನು ಪೊಲೀಸ್ ಕಸ್ಟಡಿಗೆ (12 ದಿನ) ಪಡೆಯಲಾಗಿತ್ತು. ಇದೀಗ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ‌ ನಟ‌ ದರ್ಶನ್ ಜೈಲು ಸೇರಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರಿಂದ ಎರಡನೇ ಬಾರಿಗೆ ನಟ ಜೈಲು ಸೇರುತ್ತಿದ್ದಾರೆ.
ಕಸ್ಟಡಿಯಲ್ಲಿ ಎಲ್ಲ 17 ಆರೋಪಿಗಳ ವಿಚಾರಣೆ ಮಾಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದ್ದರು. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ, ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ.
ಆರ್. ಆರ್. ನಗರ ಶೆಡ್ ಬಳಿ ಸಿಸಿಟಿವಿ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಿಸಿಟಿವಿ ಫುಟೇಜ್ ಸಂಗ್ರಹಿಸಿ, ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಇನ್ನು ಈ ಕುರಿತು ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ನಿತರರ ಹೇಳಿಕೆಯನ್ನೂ ದಾಖಲಿಸಲಾಗಿದೆ.
ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ಹಾಗೂ ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ನಡೆಸಲಾಗುತ್ತಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ‌ವರದಿ ಪಡೆದು‌ ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ.