ಭಾರತವನ್ನು ವಿಶ್ವ ಶಿಕ್ಷಣ ಕೇಂದ್ರವಾಗಿಸಲು ಮೋದಿ ಪಣ
ಪಾಟ್ನಾ,ಜೂ.೧೯-“ಭಾರತವನ್ನು ವಿಶ್ವದ ಶಿಕ್ಷಣ ಮತ್ತು ಜ್ಞಾನದ ಕೇಂದ್ರವನ್ನಾಗಿ ರೂಪಿಸುವ ಧ್ಯೇಯ ಹೊಂದಲಾಗಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗುರುತನ್ನು ಮತ್ತೊಮ್ಮೆ ವಿಶ್ವದೆಲ್ಲೆಡೆ ಪಸರಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ
ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಆರಂಭ ವಿಶ್ವಕ್ಕೆ ಭಾರತದ ಸಾಮರ್ಧ್ಯ ಅನಾವರಣ ಮಾಡಿದೆ. ಇದರ ಜೊತೆಗೆ “ನಳಂದಾದ ಪುನರ್ ನಿರ್ಮಾಣ ಭಾರತದ ಸುವರ್ಣ ಯುಗ ಆರಂಭಕ್ಕೆ ನಾಂದಿ ಹಾಡಿದೆ ಹೇಳಿದ್ದಾರೆ.
ರಾಜ್‌ಗಿರ್‌ನಲ್ಲಿ ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ನಳಂದಾ ಒಂದು ಕಾಲದಲ್ಲಿ ಭಾರತದ ಪರಂಪರೆ ಮತ್ತು ಗುರುತಿನ ಕೇಂದ್ರವಾಗಿತ್ತು. ಶಿಕ್ಷಣದ ಎಲ್ಲೆಗಳನ್ನು ಮೀರಿದೆ; ಇದು ಲಾಭ ಮತ್ತು ನಷ್ಟದ ದೃಷ್ಟಿಕೋನ ಮೀರಿದೆ ಎಂದು ಹೇಳಿದ್ದಾರೆ.ನಳಂದ ಹೆಮ್ಮೆಯ ಸಂಕೇತ, ಜೊತೆಗೆ ಮೌಲ್ಯ, ಮಂತ್ರ ಮತ್ತು ಹೆಮ್ಮೆ, ಸಾಹಸಗಾಥೆ. ನಳಂದದ ಸತ್ಯದ ಘೋಷಣೆಯಾಗಿದೆ…
ನಳಂದಾ ವಿಶ್ವವಿದ್ಯಾಲಯ ಭಾರತದ ಶೈಕ್ಷಣಿಕ ಪರಂಪರೆಯ ಸಂಕೇತ, ರೋಮಾಂಚಕ ಸಾಂಸ್ಕೃತಿಕ ವಿನಿಮಯಯ ತಾಣವಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಚೀನ ನಳಂದದಲ್ಲಿ, ಮಕ್ಕಳ ಪ್ರವೇಶವನ್ನು ಅವರ ರಾಷ್ಟ್ರೀಯತೆಯ ಆಧಾರದ ಮೇಲೆ ಮಾಡಲಾಗುತ್ತಿರಲಿಲ್ಲ. ಪ್ರತಿ ದೇಶ, ಸಮಾಜದ ಯುವಕರು ಇಲ್ಲಿಗೆ ಬರುತ್ತಿದ್ದರು. ನಳಂದ ವಿಶ್ವವಿದ್ಯಾನಿಲಯದ ಈ ಹೊಸ ಕ್ಯಾಂಪಸ್‌ನಲ್ಲಿ, ನಾವು ಅದೇ ವ್ಯವಸ್ಥೆ ಪಾಲಿಸುತ್ತೇವೆ ಎಂದಿದ್ದಾರೆ.
“೩ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ೧೦ ದಿನಗಳೊಳಗೆ ನಳಂದಾಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ… ನಳಂದ ಕೇವಲ ಒಂದು ಹೆಸರು ಮಾತ್ರವಲ್ಲ. ಬದಲಾಗಿ ಗುರುತು ಮತ್ತು ಗೌರವದ ಸಂಕೇತ. ನಳಂದ ವಿಶ್ವವಿದ್ಯಾಲಯ ಮೌಲ್ಯ ಮತ್ತು ಮಂತ್ರವಾಗಿದೆ. ಬೆಂಕಿ ಪುಸ್ತಕಗಳನ್ನು ಸುಡಬಹುದು ಆದರೆ ಅದರ ಜ್ಞಾನ ನಾಶಮಾಡಲು ಸಾಧ್ಯವಿಲ್ಲ ಎಂದರು.
ಈ ಹೊಸ ಕ್ಯಾಂಪಸ್ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಿದೆ. ಬಲವಾದ ಮಾನವೀಯ ಮೌಲ್ಯಗಳನ್ನು ಆಧರಿಸಿದ ರಾಷ್ಟ್ರಗಳು ಭೂತಕಾಲವನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಮತ್ತು ಉತ್ತಮ ಭವಿಷ್ಯಕ್ಕಾಗಿ ಅಡಿಪಾಯ ಹಾಕಬೇಕು ಎನ್ನುವುದನ್ನು ತಿಳಿಸಿದ್ದಾರೆ.
ನಳಂದ ವಿಶ್ವವಿದ್ಯಾಲಯ ಕೇವಲ ಭಾರತೀಯ ಇತಿಹಾಸದ ಪುನರುಜ್ಜೀವನವಲ್ಲ. ಆದರೆ ಇದು ಅನೇಕ ಏಷ್ಯನ್ ದೇಶಗಳ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ” ನಳಂದ ವಿಶ್ವವಿಶ್ವವಿದ್ಯಾಲಯ ಜ್ಞಾನ ಕೇಂದ್ರವಾಗಿದೆ. ೧ ಕೋಟಿಗೂ ಹೆಚ್ಚು ಮಕ್ಕಳು ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವುದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮಾತನಾಡಿ ನಳಂದ ವಿಶ್ವವಿದ್ಯಾನಿಲಯ ಸಮಾಜವನ್ನು ಮತ್ತಷ್ಟು ಹತ್ತಿರ ಮಾಡುತ್ತಿದೆ, ನೆರೆಹೊರೆಯವರೊಂದಿಗೆ ಭೂಮಿ ಮತ್ತು ಸಮುದ್ರದ ಮೂಲಕ ಸಂಪರ್ಕಿಸುವ ಮೂಲಕ ದೊಡ್ಡ ಪಾತ್ರವನ್ನು ನಿರ್ವಹಿಸಿದೆ ನಮ್ಮ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದಲ್ಲಿ ಕುಸಿತ ಕಂಡಿದ್ದೇವೆ ಆದರೆ ಈಗ ಪೂರ್ವ ಏಷ್ಯಾ ಶೃಂಗಸಭೆಯ ಸದಸ್ಯರಾಗಿರುವ ರಾಷ್ಟ್ರಗಳೊಂದಿಗೆ ನಳಂದಾ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜೊತೆಗೂಡಿರುವುದು ಖುಷಿಯಾಗಿದೆ ಎಂದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, ಐತಿಹಾಸ ಪ್ರಸಿದ್ದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆಯಾಗಿರುವುದು ವಿದ್ಯಾರ್ಥಿಗಳ ಕಲಿಕೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ಜಗತ್ತಿನ ೧೭ಕ್ಕೂ ಹೆಚ್ಚು ದೇಶಗಳ ರಾಯಬಾರಿಗಳು ಈ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.