ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಬೆಂಗಳೂರು, ಜೂ.೨೦-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾರಂಭಿಸಿರುವ ಕೂಸಿನ ಮನೆಯ ಫಲಾನುಭವಿಗಳು ಅಂಗನವಾಡಿ ಕೇಂದ್ರಗಳ ಫಲಾನುಭವಿಗಳು ಒಂದೇ ಆಗಿದ್ದಾರೆ. ಆದ್ದರಿಂದ, ಅವೈಜ್ಞಾನಿಕ ಕೂಸಿನ ಮನೆಯ ಯೋಜನೆಯನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರು ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಧರಣಿ ಮುಂದುವರೆಸಿದ್ದು, ಈ ವೇಳೆ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಆದೇಶವನ್ನು ರದ್ದುಪಡಿಸಬೇಕು.ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ?ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು.
ಅಂಗನವಾಡಿ ಕೇಂದ್ರದ ಹೆಸರು ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರವೆಂದು ಪರಿವರ್ತಿಸಬೇಕು. ಸರ್ಕಾರ ಇಲ್ಲಿನ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಶೂಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತರಿಗೆ ‘ಶಿಕ್ಷಕಿ’ಯರ ಸ್ಥಾನ ನೀಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿರುವ (ಐಸಿಡಿಎಸ್) ಆರಂಭಿಕ ಆರೈಕೆ ಮತ್ತು ಶಿಕ್ಷಣಕ್ಕೆ (ಇಸಿಸಿಇ) ಅನುದಾನ ಹೆಚ್ಚಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರಿಗೆ ನೀಡುವ ಗೌರವ ಧನವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಬೇಕು. ಇಸಿಸಿಇ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡುವಂತೆ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.