ಅಪ್ರಾಪ್ತೆ ಮೇಲೆ ಅತ್ಯಾಚಾರ ಚಿಕ್ಕಪ್ಪ ಬಂಧನ
ನವದೆಹಲಿ,ಸೆ.೨೬-ದೆಹಲಿಯ ನರೇಲಾ ಪ್ರದೇಶದಲ್ಲಿ ತನ್ನ ಅಣ್ಣನ ನಾಲ್ಕು ವರ್ಷದ ಮಗಳ ಮೇಲೆ ಸ್ವಂತ ಚಿಕ್ಕಪ್ಪ ಅತ್ಯಾಚಾರ ನಡೆಸಿ
ಕೊಂದ ಆರೋಪದ ಮೇಲೆ ೩೫ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನರೇಲಾ ಸಮೀಪದ ಗ್ರಾಮದ ಕಾಡಿನಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಆರೋಪಿ, ದಿನಗೂಲಿ ಕಾರ್ಮಿಕ, ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆರೋಪಿ ಮದ್ಯವ್ಯಸನಿಯಾಗಿದ್ದು, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳ ವಿಕೋಪಕ್ಕೆ ಹೋದಾಗ ಮಹಿಳೆ ಆರೋಪಿಯ ತಂದೆಯ ಮನೆಗೆ ಹೋಗಿದ್ದಾಳೆ.ಅಲ್ಲಿ ಅವನ ಸಹೋದರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಎಂದು ಡಿಸಿಪಿ ಹೇಳಿದರು. ಸೆ.೨೨ರಂದು ಆರೋಪಿ ತನ್ನ ಸಹೋದರನ ಮನೆಗೆ ತೆರಳಿ ಪತ್ನಿಯನ್ನು ಮನೆಗೆ ಬರುವಂತೆ ಮನವೊಲಿಸಿದ್ದ. ವಾಗ್ವಾದದ ಸಂದರ್ಭದಲ್ಲಿ, ತನ್ನ ಸಹೋದರನ ೪ ವರ್ಷದ ಮಗಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಕುಡಿತದ ಅಮಲಿನಲ್ಲಿದ್ದ ಎಂದು ಮನೆಯವರು ತಿಳಿದಿದ್ದಾರೆ. ಆದರೆ, ಹುಡುಗಿ ಕಾಣೆಯಾದಾಗ, ಅನುಮಾನ ಬಂದು ಪೊಲೀಸರಿಗೆ ದೂರ ನೀಡಿದ್ದಾರೆ.
ತಕ್ಷಣ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಿ ಸೋಮವಾರ ಆರೋಪಿಯನ್ನು ಬಂಧಿಸಲಾಯಿತು ಎಂದು ಪೋಲಿಸ್ ಅಧಿಕಾರಿಗಳು ಹೇಳಿದ್ದಾರೆ. ತನ್ನ ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಕೊಂದು ಶವವನ್ನು ನರೇಲಾದಲ್ಲಿರುವ ತಮ್ಮ ಮನೆಯ ಸಮೀಪದ ಕಾಡಿನಲ್ಲಿ ಎಸೆದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.