ಲೆಬನಾನ್ ತೆರವಿಗೆ ಆಸ್ಟ್ರೇಲಿಯಾ ಸೂಚನೆ
ಸಿಡ್ನಿ,ಸೆ.೨೬-ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರು ಲೆಬನಾನ್‌ನಲ್ಲಿ ನೆಲದ ದಾಳಿಗೆ ಸಿದ್ಧರಾಗಿರುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೆಬನಾನ್‌ನಲ್ಲಿ ಇಸ್ರೇಲಿ ಸೇನೆ
ಕಾರ್ಯಾಚರಣೆ ನಡೆಸುವ ಬಗ್ಗೆ ಆತಂಕ ವ್ಯಕ್ತವಾಗಿದೆ .ಆಸ್ಟ್ರೇಲಿಯಾ ಲೆಬನಾನ್‌ನಲ್ಲಿ ವಾಸಿಸುವ ಅಂದಾಜು ೧೫,೦೦೦ ತನ್ನ ನಾಗರಿಕರಿಗೆ ತಕ್ಷಣವೇ ಲೆಬನಾನ್ ತೊರೆಯುವಂತೆ ಕರೆ ನೀಡಿದೆ.ಬೈರುತ್ ವಿಮಾನ ನಿಲ್ದಾಣವನ್ನು ಮುಚ್ಚುವ ಸಾಧ್ಯತೆಯಿರುವುದರಿಂದ ನಂತರ ಪರಿಸ್ಥಿತಿ ಕೈಮೀರ ಬಹುದು ಎಂದು ಆಸ್ಟ್ರೇಲಿಯಾ ಈ ಸೂಚನೆ ನೀಡಿದೆ..
ಕಳೆದ ವರ್ಷ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ, ಲೆಬನಾನಿನ ಹಿಜ್ಬುಲ್ಲಾ ಗುಂಪು ಮತ್ತು ಇಸ್ರೇಲಿ ಸೇನೆಯ ನಡುವೆ ನಿಲ್ಲದ ಗುಂಡಿನ ಚಕಮಕಿ ನಡೆದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಸಂಘರ್ಷ ತೀವ್ರಗೊಂಡಿದೆ.
ಇಸ್ರೇಲ್‌ನ ಸೇನಾ ಮುಖ್ಯಸ್ಥರು ಲೆಬನಾನ್‌ನಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆಸುವ ಸಾಧ್ಯತೆಯ ಬಗ್ಗೆ ಹೇಳಿಕೆ ನೀಡಿದ್ದಾರೆ ಇದು ಭಯ ಮೂಡಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಇಸ್ರೇಲ್ ಮತ್ತು ಲೆಬನಾನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೈರುತ್ ವಿಮಾನ ನಿಲ್ದಾಣವು ದೀರ್ಘಕಾಲದವರೆಗೆ ಮುಚ್ಚಲ್ಪಡುವ ಸಾಧ್ಯತೆಯಿದೆ. ಆಸ್ಟ್ರೇಲಿಯನ್ನರು ತಕ್ಷಣವೇ ನಿರ್ಗಮಿಸುವಂತೆ ಒತ್ತಾಯಿಸಿದ್ದಾರೆ.
ಅದೇ ಸಮಯದಲ್ಲಿ, ಅವರು ಬ್ರಿಟಿಷ್ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದರು ಮತ್ತು ಲೆಬನಾನ್‌ನಲ್ಲಿ ಕದನ ವಿರಾಮದ ವಿಷಯದ ಬಗ್ಗೆ ಚರ್ಚಿಸಿದ್ದಾರೆ.