ಐವರು ಶವವಾಗಿ ಪತ್ತೆ ಸಂಶಯಕ್ಕೆಡೆ
ಚೆನ್ನೈ,ಸೆ.೨೬- ಒಂದೇ ಕುಟುಂಬದ ಐವರು ಕಾರಿನಲ್ಲಿ ಶಂಕಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಪುದುಕೊಟ್ಟೈನಲ್ಲಿ ನಡೆದಿದೆ.
ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಕಾರು ನಿಂತಿತ್ತು. ಸಂಜೆಯಾದರೂ ಅದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶಿಲಿಸಿದಾಗ ಕಾರಿನೊಳಗೆ ಐವರು ಮೃತಪಟ್ಟಿರುವುದು ಕಂಡುಬಂದಿದೆ.
ಮೃತರನ್ನು ಉದ್ಯಮಿ ಮಣಿಕಂದನ್ (೫೦), ಅವರ ಪತ್ನಿ ನಿತ್ಯ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಮೃತರು ಸೇಲಂ ನಿವಾಸಿಗಳು ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಕುಟುಂಬಸ್ಥರು ಸಾಲಗಾರರ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಮಣಿಕಂದನ್ ಲೋಹದ ವ್ಯಾಪಾರ ಮಾಡುತ್ತಿದ್ದು, ಸಾಲ ಮಾಡಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುದುಕೊಟ್ಟೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.