ತ.ನಾಡಿನಲ್ಲಿ ಧಾರಾಕಾರ ಮಳೆ
ಚೆನ್ನೈ,ಸೆ.೨೬-ಚೆನ್ನೈನಲ್ಲಿ ಭಾರೀ ಮಳೆ ದಾಖಲಾಗಿದೆ. ಚೆನ್ನೈನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ, ನಗರದ ಹಲವೆಡೆ ಜಲಾವೃತವಾಗಿದೆ.
ನುಂಗಂಬಾಕ್ಕಂ ಮತ್ತು ಮೆನಂಬಾಕ್ಕಂನಲ್ಲಿ ಮಳೆಯ ಆರ್ಭಟ ಜೋರಾಗಿದೆ.ಸಮೀಪದ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಕಂಡು ಬಂದಿದೆ. ಪ್ರಾದೇಶಿಕ ಹವಾಮಾನ ಕೇಂದ್ರವು ಉತ್ತರ ತಮಿಳುನಾಡಿನಲ್ಲಿ ವಾರಾಂತ್ಯದವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.
ಚೆನ್ನೈ ನಗರದಲ್ಲಿ ನಿನ್ನೆ ಸಂಜೆ ೬ ಗಂಟೆಯ ನಂತರ ಆರಂಭವಾದ ಮಳೆ ತಡರಾತ್ರಿಯವರೆಗೂ ಮುಂದುವರಿದಿದೆ. ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಹಾಗೂ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ನಿನ್ನೆ ಬೆಳಿಗ್ಗೆ ೮.೩೦ ರಿಂದ ಇಂದು ಬೆಳಿಗ್ಗೆ ೫.೩೦ ರವರೆಗೆ ನುಂಗಂಬಾಕ್ಕಂನಲ್ಲಿ ೭.೪೨ ಸೆಂ.ಮೀ ಮತ್ತು ಮೆನಂಬಾಕ್ಕಂನಲ್ಲಿ ೭.೧೨ ಸೆಂ.ಮೀ ಮಳೆಯಾಗಿದೆ. ರಾಜ್ಯದ ತಿರುವಳ್ಳೂರು, ವೆಲ್ಲೂರು ಮತ್ತು ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲೂ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ.
ಕೊಯಮತ್ತೂರಿನ ವಾಲ್ಪಾರೈ ಹವಾಮಾನ ಕೇಂದ್ರದಲ್ಲಿ ೮.೦ ಮಿ.ಮೀ, ತಿರುವಳ್ಳೂರು ಜಿಲ್ಲೆಯ ತಿರುಟ್ಟಣಿ ಹವಾಮಾನ ಕೇಂದ್ರದಲ್ಲಿ ೫.೦ ಮಿ.ಮೀ, ಕಡಲೂರು ಹವಾಮಾನ ಕೇಂದ್ರದಲ್ಲಿ ೦.೨ ಮಿ.ಮೀ ಮಳೆ, ವೆಲ್ಲೂರು ಹವಾಮಾನ ಕೇಂದ್ರದಲ್ಲಿ ೦.೪ ಮಿ.ಮೀ ಮತ್ತು ಪುದುಚೇರಿಯಲ್ಲಿ ೦.೩ ಮಿ.ಮೀ ಮಳೆ ದಾಖಲಾಗಿದೆ.