ಎನ್‌ಟಿಎ ಸುಧಾರಣೆಗೆ ಕೇಂದ್ರದ ಕ್ರಮ
ನವದೆಹಲಿ,ಜೂ.೧೮-ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ನೀಟ್ ಪರೀಕ್ಷಾ ವಿವಾಹದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ಗಮನಾರ್ಹ ಸುಧಾರಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಾರ್ಯಾಚರಣೆಗಳು ಮತ್ತು ಪರೀಕ್ಷೆಯ ಆಡಳಿತದಲ್ಲಿ ವ್ಯಾಪಕವಾದ ಬದಲಾವಣೆ ತಲರು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಾಗುತ್ತಿದ್ದು ಶಿಫಾರಸು ಕಳುಹಿಸಲು ಉನ್ನತ ಮಟ್ಟದ ಸಮಿತಿ ಸ್ಥಾಪಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೂನ್ ೪ ರಂದು ಪ್ರಕಟಿಸಲಾದ ನೀಟ್ ಪರೀಕ್ಷಾ ಫಲಿತಾಂಶದ ಬಳಿಕ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವ್ಯಾಪಕ ಟೀಕೆ ಎದುರಾಗಿವೆ. ಈ ಹಿನ್ನೆಲೆಯಲ್ಲಿ ಫಲಿತಾಂಶಗಳ ವಿರುದ್ಧ ಕಾನೂನು ಸವಾಲು ನಡೆಯುತ್ತಿದೆ.
ಈ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ಪ್ರಮುಖ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ಅವುಗಳನ್ನು ಬಗೆಹರಿಸಲು ಮುಂದಾಗಿರುವುದಾಗಿ ಕೇಂದ್ರ ಸರ್ಕಾರದ ಉನ್ನತ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಕೆಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದರಿಂದ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಸ್ತುತ ಈ ವಿಷಯ ನ್ಯಾಯಾಲಯದಲ್ಲಿದೆ. ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಕೂಡ ವಿವರಗಳನ್ನು ಪರಿಶೀಲಿಸುತ್ತಿದೆ. ಆದಾಗ್ಯೂ, ತನಿಖೆಗಳು ಮತ್ತು ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ಸಮಸ್ಯೆ ಬಗೆ ಹರಿಸಲು ಮುಂದಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಠಿಣ ಕ್ರಮ : ಎಚ್ಚರಿಕೆ
ನೀಟ್ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿರುವ ಯಾರೇ ಆಗಲಿ ಅವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಭರವಸೆ ನೀಡಿದ್ದಾರೆ.
ನೀಟ್ ವಿಷಯದಲ್ಲಿ ಏನಾಯಿತು ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಜೊತೆಗೆ ಸುಧಾರಣಾ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಲಕ್ಷಗಟ್ಟಲೆ ವಿದ್ಯಾರ್ಥಿಗಳ ಹಿತ ಕಾಪಾಡಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.