ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ನವದೆಹಲಿ,ಜೂ.೧೮-ನಗರದಿಂದ ದುಬೈಗೆ ಹೊರಟಿರುವ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಬಂದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬಾಂಬ್ ಬೆದರಿಕೆಯ ಮಾಹಿತಿ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಎಚ್ಚರಿಕೆ ನೀಡಲಾಗಿದೆ. ಭದ್ರತಾ ಸಂಸ್ಥೆ ಮತ್ತು ಬಾಂಬ್ ನಿಷ್ಕ್ರಿಯ ದಳ ವಿಮಾನವನ್ನು ಶೋಧಿಸಿದಾಗ ಶೋಧ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೇಲ್ ಕಳುಹಿಸಿದವರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿಮಾನಗಳಿಗೆ ಬಾಂಬ್ ಬೆದರಿಕೆ ಹೆಚ್ಚಾಗುತ್ತಿದೆ. ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಕೆನಡಾ ವಿಮಾನಕ್ಕೆ (ಎಸಿ೪೩) ಮಂಗಳವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ರಾತ್ರಿ ೧೦.೫೦ರ ಸುಮಾರಿಗೆ ಟೇಕ್ ಆಫ್ ಆಗಬೇಕಿದ್ದ ವಿಮಾನವನ್ನು ಐಸೋಲೇಷನ್ ಬೇಗೆ ಕಳುಹಿಸಲಾಗಿತ್ತು, ಸುರಕ್ಷತೆ ದೃಷ್ಟಿಯಿಂದ ವಿಮಾನ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ನಡೆಸಲಾಯಿತು. ವಿಮಾನದಲ್ಲಿ ೩೦೬ ಪ್ರಯಾಣಿಕರಿದ್ದರು.
ಪ್ಯಾರಿಸ್-ಮುಂಬೈ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಿಂದ ಮುಂಬೈಗೆ ೩೦೬ ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಈ ಬೆದರಿಕೆಯ ನಂತರ, ವಿಮಾನ ಬರುವ ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಭಾನುವಾರ ಬೆಳಗ್ಗೆ ೧೦.೧೯ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿತ್ತು.