ಅಜೇಯವಾಗಿ ಗುಂಪು ಹಂತ ಪೂರೈಸಿದ ವಿಂಡೀಸ್
ಸೇಂಟ್ ಲೂಸಿಯಾ.ಜೂ.೧೮- ನಿಕೊಲೊಸ್ ಪೂರಾನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ವಿರುದ್ಧ ೧೦೪ ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಆತಿಥೇಯ ವಿಂಡೀಸ್ ಸೋಲಿಲ್ಲದೇ ಅಜೇಯವಾಗಿ ಗುಂಪು ಹಂತವನ್ನು ಪೂರ್ಣಗೊಳಿಸಿದೆ.
ಟಿ೨೦ ವಿಶ್ವಕಪ್‌ನಲ್ಲಿ ಗುಂಪು ಹಂತದ ಪಂದ್ಯಗಳು ಮುಕ್ತಾಯವಾಗಿವೆ.
ಡೆರೆನ್ ಸಾಮಿ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ಇಂಡೀಸ್ ೨೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೧೮ ರನ್ ಗಳಿಸಿತು. ಆಫ್ಘಾನಿಸ್ತಾನ ತಂಡ ೧೬.೨ ಓವರ್‌ಗಳಲ್ಲಿ ೧೧೪ ರನ್‌ಗಳಿಗೆ ಆಲೌಟ್ ಆಯಿತು.
ವೆಸ್ಟ್‌ಇಂಡೀಸ್ ಪರ ಬ್ರಾಂಡಾನ್ ಕಿಂಗ್ ೭ ರನ್. ನಂತರ ಜತೆಗೂಡಿದ ಜಾನ್ಸನ್ ಚಾರ್ಲ್ಸ್ (೪೩ರನ್) ಮತ್ತು ನಿಕೊಲೊಸ್ ಪೂರಾನ್ (೯೮ ರನ್) ೮೦ ರನ್ ಜತೆಯಾಟ ನೀಡಿದರು. ಅಜಮತ್‌ಹುಲ್ಲಾ ಅವರ ಒಂದೇ ಓವರ್‌ನಲ್ಲಿ ನಿಕಲೊಸ್ ಪೂರಾನ್ ೩೬ ರನ್ ಚಚ್ಚಿದ್ದು ವಿಶೇಷವಾಗಿತ್ತು.
ನಿಕೊಲೊಸ್ ಪೂರಾನ್ ೫೩ ಎಸೆತಗಳಲ್ಲಿ ೬ ಬೌಂಡರಿ ೮ ಸಿಕ್ಸರ್ ಸಿಡಿಸಿ ೯೮ ರನ್ ಹೊಡೆದು ರನೌಟ್ ಆದರು. ಶಾಯ್ ಹೋಪ್ ೨೫, ನಾಯಕ ರೊವಮನ್ ಪೊವೆಲ್ ೨೬, ಆಂಡ್ರೆ ರಸೆಲ್ ಅಜೇಯ ೩, ರುಥರ್‌ಫೋರ್ಡ್ ಅಜೇಯ ೧ ರನ್ ಗಳಿಸಿದರು.
ಅಫ್ಘಾನಿಸ್ತಾನ ಪರ ಗುಲ್ಬುದ್ದೀನ್ ನೈಬ್ ೧೪ಕ್ಕೆ ೨, ನವೀನ್ ಉಲ್ ಹಕ್ ೪೧ಕ್ಕೆ ೧, ಅಜಮತ್‌ಹುಲ್ಲಾ ೪೧ಕ್ಕೆ ೧ ವಿಕೆಟ್ ಪಡೆದರು.
೨೧೯ ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಆಫ್ಘಾನಿಸ್ತಾನ ವೇಗಿ ಒಬೆಡ್ ಮೆಕಾಯ್ ದಾಳಿಗೆ ತತ್ತರಿಸಿತು. ಇಬ್ರಾಹಿಂ ಜದ್ರಾನ್ ೩೮, ಅಜಮತ್‌ಹುಲ್ಲಾ ೨೩, ರಶೀದ್ ಖಾನ್ ೧೮, ಜನತಾ ೧೪ ರನ್ ಗಳಿಸಿದರು.
ವಿಂಡೀಸ್ ಪರ ಒಬೆಡ್ ಮೆಕಾಯ್ ೧೪ಕ್ಕೆ ೩, ಗುಡಾಕೇಶ್ ಮೋತಿ ೨೮ಕ್ಕೆ ೨, ಹೊಸೇನ್ ೨೧ಕ್ಕೆ ೨, ರಸೆಲ್ ಹಾಗೂ ಜೋಸೆಫ್ ತಲಾ ೧ ವಿಕೆಟ್ ಪಡೆದರು.