ಸಿದ್ದು ವಿರುದ್ಧ ಅಶೋಕ್ ಕಿಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜೂ.೧೮:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯ, ದಡ್ಡತನವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಟೀಕೆ ಮಾಡುತ್ತಿದ್ದಾರೆ. ಕರ್ನಾಟಕ ಕಂಡ ಅತ್ಯಂತ ಅಸಮರ್ಥ, ಪೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್-ಡೀಸಲ್ ಬೆಲೆಯನ್ನು ಸಮರ್ಥಿಸಿಕೊಂಡು ಕೇಂದ್ರದ ವಿರುದ್ಧ ಟೀಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಿಡಿಕಾರಿರುವ ಆರ್. ಅಶೋಕ್ ಅವರು ಕುಣಿಯಲಾರದವನಿಗೆ ನೆಲ ಡೊಂಕು ಎಂಬ ವೈಫಲ್ಯ ದಡ್ಡತನವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ ಅಸಮರ್ಥರು ಎಂದು ಟೀಕಿಸಿದ್ದಾರೆ.
ನಾಲ್ಕು ಅಹಂಕಾರದ ಮಾತುಗಳನ್ನಾಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂಬ ಭ್ರಮೆಯಿಂದ ಸಿದ್ದರಾಮಯ್ಯರವರೇ ಹೊರಗೆ ಬನ್ನಿ, ನಿಮ್ಮ ಅಹಂಕಾರದ ದರ್ಪದ ಮಾತುಗಳು ನಿಮ್ಮ ಚಾರಿತ್ರ್ಯವನ್ನು ಪ್ರದರ್ಶನ ಮಾಡುತ್ತಿದೆಯೇ ಹೊರತು ಅದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಿಮ್ಮ ಅಹಂಕಾರದ ಮಾತುಗಳಿಂದ ನಮ್ಮನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.
ಗೆದ್ದಲು ಕಷ್ಟಪಟ್ಟು ಹುತ್ತ ಕಟ್ಟುತ್ತದೆ ಹುತ್ತ ಕಟ್ಟಲು ಯಾವುದೇ ರೀತಿಯಲ್ಲೂ ಸಾಮರ್ಥ್ಯವಿಲ್ಲದ ಹಾವು ಮಾತ್ರ ಕಟ್ಟುವ ಕಾರ್ಯವೆಲ್ಲವೂ ಮುಗಿದ ಮೇಲೆ ಹುತ್ತದಲ್ಲಿ ಬಂದು ಕೂರುತ್ತದೆ ಇದು ನಿಮ್ಮ ಯೋಗ್ಯತೆಯೇ ಎಂದು ಹರಿಹಾಯ್ದಿದ್ದಾರೆ.
ದಿಟ್ಟ ಪ್ರಶ್ನೆಗಳು ಎದುರಾದಾಗ ಅಹಂಕಾರದ ಮಾತುಗಳನ್ನಾಡಿ ವೈಯಕ್ತಿಕ ನಿಂದನೆ ಮಾಡುವುದು ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಜನರ ಗಮನ ಬೇರೆಡೆ ಸೆಳೆದು ದಿಕ್ಕು ತಪ್ಪಿಸುವುದು, ಮತ್ತೊಬ್ಬರ ಸಾಧನೆಯನ್ನು ತನ್ನದು ಎಂದು ಹೇಳಿಕೊಂಡು ತಿರುಗಾಡುವುದು, ಪುಕ್ಕಟ್ಟೆ ಪ್ರಚಾರ ಪಡೆಯುವುದು ನಾನೊಬ್ಬನೇ ಮಹಾ ಬುದ್ಧಿವಂತೆ ಎಂದು ಗರ್ವ ಪಡೆಯುವುದು ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರ ೫ ಗ್ಯಾರೆಂಟಿ ಗುಣಗಳು ಎಂದು ವ್ಯಂಗ್ಯವಾಡಿರುವ ಅಶೋಕ್, ನಿಮ್ಮ ಈ ಆಟಗಳು ಇನ್ನು ಮುಂದೆ ನಡೆಯುವುದಿಲ್ಲ ಸಿದ್ದರಾಮಯ್ಯ ಎಂದು ಹರಿಹಾಯ್ದಿದ್ದಾರೆ.
ಇತಿಹಾಸ ನಿಮ್ಮನ್ನು ಕರ್ನಾಟಕ ಕಂಡ ಅತ್ಯಂತ ಅಸಮರ್ಥ, ಪೆದ್ದ ಮುಖ್ಯಮಂತ್ರಿ ಎಂದು ಕರೆಯುತ್ತದೆ ನೆನಪಿಡಿ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.