ಜನರ ಆಶೋತ್ತರಗಳಿಗೆ ಸ್ಪಂದಿಸುವೆ: ಸೋಮಣ್ಣ
ತುಮಕೂರು, ಜೂ. ೧೪- ನಗರದ ಸಿದ್ದಗಂಗಾ ಮಠಕ್ಕೆ ಕೇಂದ್ರದ ನೂತನ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ ಅವರು, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಎನ್‌ಡಿಎ ಒಕ್ಕೂಟದಿಂದ ನನ್ನನ್ನು ರಾಷ್ಟ್ರದ ಮಂತ್ರಿಯಾಗಿ ನೇಮಕ ಮಾಡುವ ಮೂಲಕ ಎರಡು ಉಪಯುಕ್ತವಾದ ಇಲಾಖೆಗಳ ಜವಾಬ್ದಾರಿ ನೀಡಿದ್ದಾರೆ. ದೇಶದ ಜನತೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ತಕ್ಕಂತೆ ಕೆಲಸ ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು. ಪ್ರಚಲಿತ ರಾಷ್ಟ್ರದಲ್ಲಿರುವ ಎರಡು ಇಲಾಖೆಗಳಿಂದ ಜನಸಾಮಾನ್ಯರಿಗೆ ಸಿಗಬೇಕಾಗಿರುವ ಅವಶ್ಯತೆಗಳ ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಜಿಲ್ಲೆಯ ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಆಗಿರುವ ಕಹಿ ಘಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಈ ಘಟನೆ ಯಾವ ರೀತಿ ಆಗಿದೆ ಎಂಬ ವಿಮರ್ಶೆ ಮಾಡುತ್ತಿದ್ದು, ಅಧಿಕಾರಿಗಳಿಂದ ಅಗತ್ಯ ವರದಿ ಕೇಳಿದ್ದೇವೆ ಎಂದರು.
ನನ್ನನ್ನು ಕೇಂದ್ರ ಸಚಿವನಾಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ ಅವರು, ಭಾನುವಾರ ಎರಡೂ ಪಕ್ಷದ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಚಿದಾನಂದ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ, ಸಿ.ಎಂ. ರಾಜಪ್ಪ, ವಿಶ್ವನಾಥಗೌಡ, ಎಂ.ವಿ. ವೀರಭದ್ರಯ್ಯ, ದಿಲೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಮಠಗಳಿಗೆ ಭೇಟಿ
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ತಮ್ಮ ಆರಾಧ್ಯ ದೈವ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಪೂಜೆ ಸಲ್ಲಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು, ನಂತರ ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಮಠ, ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠ, ಬೆಳ್ಳಾವಿ ಕಾರದೇಶ್ವರ ಮಠ, ಗೋಡೆಕೆರೆ ಮಠ, ತಿಪಟೂರು ಮಠ, ರಂಗಾಪುರ ಮಠ, ನೊಣವಿನಕೆರೆ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಶ್ರೀಗಳ ಆಶೀರ್ವಾದ ಪಡೆದರು.