ಕಪಾಳಮೋಕ್ಷ ಪ್ರಕರಣ ಕಂಗನಾಗೆ ಕರಣ್ ಬೆಂಬಲ
ಮುಂಬೈ,ಜೂ.೧೩-ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಮಂಡಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆ ಪ್ರವೇಶಿಸಿದ್ದಾರೆ. ಆದರೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್‌ನಿಂದ ಕಪಾಳಮೋಕ್ಷವಾದಾಗಿನಿಂದ ಈ ವಿಷಯ ಎಲ್ಲೆಡೆ ಚರ್ಚೆ ಆಗಿದೆ. ಇದೀಗ ಈ ವಿಚಾರವಾಗಿ ನಿರ್ದೇಶಕ ಕರಣ್ ಜೋಹರ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿಯವರೆಗೆ, ಕಂಗನಾ ರಣಾವತ್ ಅವರ ಕಪಾಳಮೋಕ್ಷ ಹಗರಣದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಂಗಣಾ ಅವರನ್ನು ಬೆಂಬಲಿಸಿದ್ದಾರೆ. ಆಲಿಯಾ ಭಟ್, ಅನುಪಮ್ ಖೇರ್, ಸೋನಾಕ್ಷಿ ಸಿನ್ಹಾ ಮುಂತಾದ ದೊಡ್ಡ ತಾರೆಯರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಈಗ ಕರಣ್ ಜೋಹರ್ ಕಂಗನಾ ಅವರನ್ನು ಕಪಾಳಮೋಕ್ಷ ಪ್ರಕರಣದಲ್ಲಿ ಬೆಂಬಲಿಸಿದ್ದಾರೆ.
ಕರಣ್ ಜೋಹರ್ ತಮ್ಮ ಮುಂದಿನ ಪ್ರೊಡಕ್ಷನ್ ಹೌಸ್ ನ ಕಿಲ್ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆ ಸಮಯದಲ್ಲಿ ಯಾರೋ ಕಂಗನಾ ಜೊತೆ ಕಪಾಳಮೋಕ್ಷ ಮಾಡಿದ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಕರಣ ನಾನು ಯಾವುದೇ ರೀತಿಯ ದೈಹಿಕ ಅಥವಾ ಮೌಖಿಕ ಹಿಂಸೆಯನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಕರಣ್ ಜೋಹರ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಾಗ ಕರಣ್ ಅವರನ್ನು ಹೊಗಳುತ್ತಿದ್ದಾರೆ. ಈಗ ಇಬ್ಬರೂ ಹಳೆಯ ವಿಷಯಗಳನ್ನು ಮರೆತು ಮುನ್ನಡೆಯಬೇಕು ಎಂದು ಕೆಲವು ಬಳಕೆದಾರರು ಹೇಳುತ್ತಿದ್ದಾರೆ.