ಬಿಸಿಲಿನಿಂದ ಅಸ್ವಸ್ಥಗೊಂಡ ಮಂಗ ರಕ್ಷಣೆ
ಹೊಸದಿಲ್ಲಿ, ಜೂ.೧೩-ರಾಜಧಾನಿ ದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನಿವಾಸದಲ್ಲಿ ತೀವ್ರ ಬಿಸಿಲಿನ ಭಾದೆಯಿಂದ ಅಸ್ವಸ್ಥಗೊಂಡಿದ್ದ ಒಂದು ವರ್ಷದ ಕೋತಿಯನ್ನು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ವನ್ಯಜೀವಿ ಎಸ್‌ಒಎಸ್ ರಾಪಿಡ್ ರೆಸ್ಪಾನ್ಸ್ ರಕ್ಷಿಸಿ ಚಿಕಿತ್ಸೆ ನೀಡಿದೆ. ಎನ್‌ಜಿಒ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದೆ. ವಿಪರೀತ ಬಿಸಿಲಿನ ಪ್ರಖರತೆಗೆ ಕೋತಿ ಅಸ್ವಸ್ಥಗೊಂಡಿದೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಉಸಿರಾಡಲು ಕಷ್ಟವಾಗಿತ್ತು ಎನ್ನಲಾಗಿದೆ.
ಹೇಳಿಕೆ ಪ್ರಕಾರ, ಎನ್‌ಜಿಒಗೆ ಪ್ರಧಾನಿ ನಿವಾಸದಿಂದ ಕರೆ ಬಂದಿದ್ದು, ತಕ್ಷಣವೇ ಕೋತಿಯನ್ನು ರಕ್ಷಿಸಲು ತಂಡವನ್ನು ಪ್ರಧಾನಿ ನಿವಾಸಕ್ಕೆ ಕಳುಹಿಸಲಾಗಿದೆ ಮತ್ತು ತಂಡವು ಕೋತಿಯನ್ನು ತಕ್ಷಣವೇ ವನ್ಯಜೀವಿ ಎಸ್‌ಒಎಸ್‌ನ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದಿದೆ. ಪಶುವೈದ್ಯರ ತಂಡ ಕೋತಿಯ ಸ್ಥಿತಿಯನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದೆ.
ಸದ್ಯ ಆ ಕೋತಿಯ ಆರೋಗ್ಯ ಸುಧಾರಿಸಿದ್ದು, ಸಂಪೂರ್ಣ ಚೇತರಿಸಿಕೊಳ್ಳಲು ನಿಗಾ ಇರಿಸಲಾಗಿದೆ ಎಂದು ಎನ್‌ಜಿಒ ತಿಳಿಸಿದೆ.
ವನ್ಯಜೀವಿ ಎಸ್‌ಒಎಸ್ ಶಾಖದ ಅಲೆಯ ಸಂದರ್ಭದಲ್ಲಿ, ಪ್ರಾಣಿಗಳ ಉಳಿವಿಗಾಗಿ ತಕ್ಷಣ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ಮಾಹಿತಿ ನೀಡಿದೆ.
ರಾಜಧಾನಿ ದಿಲ್ಲಿಯಲ್ಲಿ ಕೆಲ ದಿನಗಳಿಂದ ಉಷ್ಣಾಂಶ ಏರಿಕೆಯಾಗುತ್ತಿದ್ದು, ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ಇದು ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.ದಕ್ಷಿಣ ಭಾರತದಲ್ಲಿ ಮಳೆಯಿಂದಾಗಿ ವಾತಾವರಣ ತಂಪಾಗಿದ್ದರೂ ದೆಹಲಿ ಸೇರಿದಂತೆ ಉತ್ತರ ಭಾರತದ ಜನರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಸುಡುವ ಬಿಸಿಲಿನ ತಾಪಕ್ಕೆ ಮನುಷ್ಯರಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳ ಪರಿಪಾಟಲು ಹೇಳತೀರದು. ಹವಾಮಾನ ಇಲಾಖೆ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಮುಂಗಾರು ದೆಹಲಿ ಪ್ರವೇಶಿಸಬಹುದು ಎನ್ನಲಾಗಿದೆ.