ಪೆಮಾ ಖಂಡು ೩ನೇ ಬಾರಿ ಅರುಣಾಚಲ ಸಿಎಂ
ಇಟಾನಗರ,ಜೂ.೧೩- ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪೆಮಾ ಖಂಡು ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರೊಂದಿಗೆ ಚೌನಾ ಮೇನ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಗೌಪ್ಯತೆ ಸ್ವೀಕರಿಸಿದರು.
ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗು ಹಲವು ಸಚಿವರಿಗೆ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆಟಿ ಪರ್ನಾಯಕ್ ಅವರು ಪ್ರಮಾಣವನ ಮತ್ತು ಅಧಿಕಾರ ಗೌಪ್ಯತೆ ಬೋಧಿಸಿದರು. ಈ ಮೂಲಕ ಈಶಾನ್ಯ ರಾಜ್ಯದಲ್ಲಿ ಸತತ ಮೂರನೇ ಭಾರಿಗೆ ಕೇಸರಿ ಪಕ್ಷದ ಆಡಳಿತ ಅಸ್ಥಿತ್ವಕ್ಕೆ ಬಂದಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಜೆಪಿ ನಡ್ಡಾ, ಕಿರಣ್ ರಿಜಿಜು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ , ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾದರು.
೬೦ ವಿಧಾನಸಭಾ ಸದಸ್ಯರ ಪೈಕಿ ೪೬ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಸೇರಿದಂತೆ ಹತ್ತು ಮಂದಿ ಶಾಸಕರೂ ಅವಿರೋಧವಾಗಿ ಆಯ್ಕೆಯಾಗಿದ್ದರು.